ಮಕ್ಕಳು ಜೀವನದಲ್ಲಿ ಎಡವದಿರಲೆಂದು ಮುದ್ದು ಮಾಡಿ ಬೆಳೆಸಿದ ಅಪ್ಪ ಅಮ್ಮಂದಿರು ಹೇಗೆ ಅಪೇಕ್ಷಿಸುತ್ತಾರೋ, ಅರಿವಿದ್ದೋ, ಅರಿವಿಲ್ಲದೆಯೋ ಎಡವಿ ಬಿದ್ದಾಗ ಮಕ್ಕಳು ಕೂಡ ಪ್ರೀತಿಯ ಅಪ್ಪ ಮತ್ತು ಅಮ್ಮ ತಮ್ಮ ಕಿರುಬೆರಳು ಹಿಡಿದು ಎಬ್ಬಿಸುತ್ತಾರೆಂದು ಅಪೇಕ್ಷಿಸುತ್ತವೆ. ಸೋತಾಗ ಕೈಹಿಡಿದು ಎಬ್ಬಿಸಿ, ಗೆದ್ದಾಗ ಬೆನ್ನುತಟ್ಟಿ ಪ್ರೋತ್ಸಾಹಿಸುವುದು ಪ್ರತಿ ಪಾಲಕರ ಕರ್ತವ್ಯ.
ಮಗಳ ವರ್ತನೆ ಯಾಕೋ ಸರಿಯಾಗಿಲ್ಲ. ಇಂಥದೊಂದು ಅನುಮಾನ ಗೋಪಾಲರಾವ್‌ನನ್ನು ಒಂದು ವಾರದಿಂದ ಬಿಡದೆ ಕಾಡುತ್ತಿತ್ತು. ಅದಕ್ಕೆ ಸರಿಯಾಗಿ, ಎಸ್ಸೆಸ್ಸೆಲ್ಸಿ ಓದುತ್ತಿದ್ದ ಅವನ ಮಗಳು ಶ್ವೇತಾ, ನೇರಾನೇರ ಮಾತಿಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದಳು. ಈತ ಆಫೀಸಿನಿಂದ ಬರುವ ವೇಳೆಗೆ ಹೋಂವರ್ಕ್ ಎಂದೋ; ಪ್ರಾಜೆಕ್ಟ್ ವರ್ಕ್ ಎಂದೋ ಬಿಜಿಯಾಗಿರುತ್ತಿದ್ದಳು. ಬೆಳಗ್ಗೆಯಂತೂ, ಟ್ಯೂಶನ್‌ನ ನೆಪದಲ್ಲಿ ಹೋಗಿಬಿಟ್ಟರೆ, ಆಕೆ ಮನೆಗೆ ಬರುವ ವೇಳೆಗೆ ಗೋಪಾಲರಾಯರು ಆಫೀಸಿಗೆ ಹೊರಟು ನಿಂತಿರುತ್ತಿದ್ದರು.
ತುಂಬ ವರ್ಷಗಳಿಂದಲೂ ಇದೇ ಪರಿಸ್ಥಿತಿಯಿತ್ತು ನಿಜ. ಆದರೆ, ಈ ಹಿಂದೆಲ್ಲಾ ಮಗಳ ಮಾತು-ವರ್ತನೆ, ಎರಡರಲ್ಲೂ ಗೋಪಾಲರಾವ್‌ಗೆ ಚಿಕ್ಕದೊಂದು ಅನುಮಾನವೂ ಬಂದಿರಲಿಲ್ಲ. ಮಗಳು ಹೀಗೆ ಮುಖ ಮರೆಸಿಕೊಂಡು ಓಡಾಡ್ತಾಳೆ ಅಂದರೆ, ಏನೋ ಅನಾಹುತ ನಡೆದಿದೆ ಅಂದುಕೊಂಡರು ಗೋಪಾಲರಾವ್. ಹೇಳಿ ಕೇಳಿ ಮಗಳಿಗೆ ಹದಿನೈದು ತುಂಬಿದೆ. ಯಾರಾದ್ರೂ ಹುಡುಗ ಇವಳಿಗೆ ಲವ್ ಲೆಟರ್ ಕೊಟ್ಟು ಬಿಟ್ನಾ? ವಯಸ್ಸಿನ ಹುಚ್ಚು ಆವೇಶದಲ್ಲಿ ಮಗಳೂ ಅದನ್ನು ಒಪ್ಪಿಬಿಟ್ಟಳಾ? ಅದೇ ಕಾರಣದಿಂದ ನಮಗೆ ಸಿಗದೇ ಓಡಾಡ್ತಾ ಇದಾಳಾ...? ಎಂದೆಲ್ಲ ಕಲ್ಪಿಸಿಕೊಂಡರು ಗೋಪಾಲರಾವ್. ಹೆಂಡತಿ ಕೂಡ ಕೆಲಸಕ್ಕೆ ಹೋಗ್ತಾ ಇದಾಳಲ್ಲ, ಅವಳಿಗೆ ಈ ವಿಷಯ ಗೊತ್ತಾದರೆ- ರಂಪ ರಾಮಾಯಣ ಆದೀತು. ಅವಳಿಗೆ ಬಿಪಿ, ಶುಗರ್ ಎರಡೂ ಇದೆ. ಏನಾದ್ರೂ ಫಜೀತಿ ಆದ್ರೆ ಕಷ್ಟ. ಅವಳಿಗೆ ಗೊತ್ತಾಗುವ ಮೊದಲು ನಾನೇ ಪರಿಸ್ಥಿತೀನ ಹ್ಯಾಂಡಲ್ ಮಾಡೋಣ ಎಂದುಕೊಂಡ ಗೋಪಾಲರಾವ್ ಅದೊಂದು ಶನಿವಾರ ಮಧ್ಯಾಹ್ನ ದಿಢೀರನೆ ಮನೆಗೆ ಬಂದೇಬಿಟ್ಟರು.
ಆಗಲೂ ಮಗಳು ಮನೆಯಲ್ಲಿರಲಿಲ್ಲ. ಸ್ಕೂಲಿಂದ ಬಂದವಳು ಎಲ್ಲಿಗೆ ಹೋದಳು? ಹಾಗೆ ಹೋಗುವ ಮುನ್ನ ಒಂದು ಪತ್ರ ಬರೆದಿಟ್ಟು- ಹೋಗಬಾರದಿತ್ತಾ? ಅಥವಾ ಅವರ ಅಮ್ಮನಿಗೇನಾದರೂ ಈ ವಿಷಯವಾಗಿ ಮೊದಲೇ ಹೇಳಿದ್ದಾಳಾ? ಇಂಥವೇ ಯೋಚನೆಯಲ್ಲಿ ಗೋಪಾಲರಾವ್ ಹಣ್ಣಾಗಿ ಹೋದ. ಉಹುಂ, ಅವನಿಗೆ ಖಡಕ್ ಉತ್ತರ ಹೊಳೆಯಲಿಲ್ಲ.
ನಂತರ, ಏನು ಮಾಡಲೂ ತೋಚದೆ, ಒಂದು ಅನುಮಾನವನ್ನು ಅಂಗೈಲಿ ಹಿಡಿದುಕೊಂಡೇ ಗೋಪಾಲರಾವ್ ಒಳಮನೆಗೆ ನಡೆದುಬಂದ. ಒಂದೆರಡು ನಿಮಿಷಗಳ ನಂತರ, ಮಗಳ ರೂಮಿನ ಕದ ತೆರೆದು ಸುಮ್ಮನೇ ಹಾಗೊಮ್ಮೆ ನೋಡಿದ. ಮಂಚದ ಮೇಲೆ ಒಂದು ಕವರ್ ಬಿದ್ದಿರುವುದು ಕಾಣಿಸಿತು. ಈತ ಕುತೂಹಲದಿಂದ ಅತ್ತ ನೋಡಿದರೆ- ಅದರ ಮೇಲೆ ಅಪ್ಪನಿಗೆ, ತುಂಬ ಪ್ರೀತಿಯಿಂದ...' ಎಂದು ಬರೆದಿತ್ತು. ಅಚ್ಚರಿ, ಕುತೂಹಲದಿಂದಲೇ ಗೋಪಾಲರಾವ್ ಕವರ್ ಒಡೆದ. ಒಳಗಿದ್ದ ಪತ್ರದಲ್ಲಿ ಹೀಗೊಂದು ವಿವರಣೆಯಿತ್ತು:
ಮೈಡಿಯರ್ ಪಪ್ಪಾ, ಕ್ಷಮಿಸು. ಒಂದು ದೊಡ್ಡ ಸಂಕಟ ಮತ್ತು ನೋವಿನಿಂದ ನಿನಗೆ ಈ ಪತ್ರ ಬರೀತಾ ಇದೀನಿ. ಈ ವಿಷಯ ತಿಳಿದು ನಿಂಗೆ ಬೇಸರ ಆಗುತ್ತೆ. ಸಿಟ್ಟೂ ಬರುತ್ತೆ. ಒಂದು ವೇಳೆ ನಾನು ಮನೇಲಿದ್ದೇ ನಿನ್ನೊಂದಿಗೆ ಈ ವಿಷಯ ಹೇಳಿದ್ದಿದ್ರೆ, ಮಮ್ಮೀನೂ ನೀನೂ ಜಗಳಕ್ಕೆ ನಿಲ್ತಾ ಇದ್ರಿ. ಮಗಳು ನಿನ್ನಿಂದಲೇ ಹಾಳಾಗಿದ್ದು ಅಂತ ಪರಸ್ಪರ ದೂರ್‍ತಾ ಇದ್ರಿ. ರಂಪ ರಾಮಾಯಣ ಮಾಡಿಬಿಡ್ತಾ ಇದ್ರಿ. ಅಂಥದೊಂದು ಸೀನ್ ನೋಡಬಾರ್‍ದು ಅಂತಾನೇ ಹೀಗೆ ಒಂದು ಪತ್ರ ಬರೆಯುವ ನಿರ್ಧಾರಕ್ಕೆ ಬಂದೆ ಕಣಪ್ಪಾ...
ನೇರವಾಗಿ ಹೇಳಿಬಿಡ್ತಾ ಇದೀನಿ. I am Fall in love with Santhosh ಕಣಪ್ಪಾ... ಅಂದಹಾಗೆ ಈ ಸಂತೋಷ್ ನನ್ನ ಕ್ಲಾಸ್‌ಮೇಟ್ ಅಲ್ಲ. ಹಿಂದಿನ ಬೀದಿಯ ಮಾರ್ವಾಡಿ ಹುಡುಗನೂ ಅಲ್ಲ. ಅವನು ಎಂಬಿಬಿಎಸ್ ಡ್ರಾಪ್ ಔಟು. ಆಗಲೇ 35 ವರ್ಷ ಆಗಿದೆಯಪ್ಪಾ ಅವನಿಗೇ. ಹಾಗಿದ್ರೂ ಸಖತ್ ಹ್ಯಾಂಡ್‌ಸಮ್ ಆಗಿದಾನೆ. ಜೋರಾಗಿ ಬೈಕ್ ಓಡಿಸ್ತಾನೆ. ಸಖತ್ತಾಗಿ ಹಾಡು ಹೇಳ್ತಾನೆ. ರಜನಿ, ಥೇಟ್ ರಜನಿ ಥರಾನೇ ಸಿಗರೇಟು ಸೇದ್ತಾನೆ. ಅವನು ಜತೆಗಿದ್ರೆ ನನಗಂತೂ ಯಾರಂದ್ರೆ ಯಾರೂ ನೆನಪಾಗೋದಿಲ್ಲ. ನಾನಂತೂ ಅವನನ್ನು ಪ್ರೀತಿಯಿಂದ ಸಂತೂ ಅಂತೀನಿ. ಅವನಿಗೇ ಗಾಬರಿಯಾಗಬೇಕು, ಅಷ್ಟೊಂದು ಪ್ರೀತಿಸ್ತಾ ಇದೀನಿ....
ಮೊನ್ನೆ ವ್ಯಾಲೆಂಟೈನ್ಸ್ ಡೇ ಮುಗೀತಲ್ಲ, ಅವತ್ತು ಇಬ್ರೂ ಕಾಫಿ ಡೇಗೆ ಹೋಗಿದ್ವಿ. ಇಡೀ ನಾಲ್ಕು ಗಂಟೆ ಅಲ್ಲಿದ್ವಿ. ನಂತರ ಸಂತೋಷ್ ನನ್ನನ್ನ ಅವನ ರೂಂಗೆ ಕರ್‍ಕೊಂಡು ಹೋದ. ಇಡೀ ಮನೇಲಿ ನಾವಿಬ್ರೇ. ಅವನು ದಿಢೀರನೆ ಹತ್ತಿರ ಬಂದ. ಶ್ವೇತಾ' ಅಂದ, ಮೈ ಮುಟ್ಟಿದ. ಮುತ್ತುಕೊಟ್ಟ. ಕಣ್ಣು ಹೊಡೆದ. ಆಮೇಲೆ ಅನಾಮತ್ತಾಗಿ ತಬ್ಬಿಕೊಂಡು ನೀನು ನಂಗೆ ಹತ್ತು ಮಕ್ಕಳನ್ನ ಕೊಡ್ಬೇಕು ಕಣೇ ಶ್ವೇತಾ ಅಂದ. ಆಯ್ತು ಡಿಯರ್' ಅನ್ನದೇ ಇರೋಕೆ ನನಗೇ ಮನಸ್ಸಾಗಲಿಲ್ಲ. ಹೌದಪ್ಪಾ, ನಾನೀಗ ಗರ್ಭಿಣಿ!
ಇನ್ನೊಂದು ಇಂಪಾರ್ಟೆಂಟ್ ವಿಷಯ ಹೇಳಲಾ? ಸಂತೋಷ್‌ಗೆ ಹುಡುಗೀರ ಹುಚ್ಚು-ವಿಪರೀತ. ಈಗಾಗ್ಲೇ ಅವನಿಗೆ ಐದಾರು ಮಂದಿ ಗರ್ಲ್ ಫ್ರೆಂಡ್ಸ್ ಇದಾರೆ ಅಂತ ನಂಗೇ ಗೊತ್ತು. ಇದೆಲ್ಲ ಗೊತ್ತಿದ್ದೂ ನಾನು ಅವನನ್ನು ಇಷ್ಟಪಟ್ಟಿದೀನಿ. ಅವನೊಂದಿಗೇ ಬದುಕ್ತಾ ಇದೀನಿ. ಬದುಕೋಕೆ ಏನು ಮಾಡ್ತೀರಾ? ಹಣ ಸಂಪಾದನೆಗೆ ಯಾವ ಮಾರ್ಗವಿದೆ' ಅಂತೀಯ ಅಲ್ವ? ಹೌದು. ಹೊಟ್ಟೆಪಾಡಿಗೆ ಅಂತಾನೇ ಬ್ರೌನ್ ಶುಗರ್ ಮಾರುವ ಕೆಲಸ ಮಾಡ್ತಾನೆ ಸಂತೋಷ್. ಆಗೊಮ್ಮೆ ಈಗೊಮ್ಮೆ ನಾನೂ ಅವನ ಜತೆ ಕೈ ಜೋಡಿಸ್ತೀನಿ. ಡ್ರಗ್ಸ್ ತಗೊಳ್ಳೋದು ಈಗ ಎಲ್ಲಾ ಕಡೆ ಕಾಮನ್ ಅಲ್ವ? ಹಾಗಾಗಿ ನಮಗಂತೂ ಯಾವುದೇ ಪಾಪಪ್ರಜ್ಞೆ ಕಾಡ್ತಾ ಇಲ್ಲ...
ಬೇಸರ ಮಾಡ್ಕೋಬೇಡ ಅಪ್ಪಾ. ಅಂದಾಜು ಇನ್ನು ಹತ್ತು ವರ್ಷಗಳ ನಂತರ ನಿಂಗೆ ಸಿಗ್ತೀನಿ. ಆ ಹೊತ್ತಿಗೆ ಏಡ್ಸ್‌ಗೆ ಖಂಡಿತ ಒಂದು ಔಷಧಿ ದೊರಕಿರುತ್ತೆ. ಆ ಔಷಧಿಯಿಂದಲೇ ನನ್ನ ಸಂತೋಷ್‌ನ ಕಾಯಿಲೆ ವಾಸಿಯಾಗಿರುತ್ತೆ! (ಇದನ್ನು ಜಾಸ್ತಿ ವಿವರಿಸಿ ಹೇಳಬೇಕಿಲ್ಲ. ಅಲ್ವೇನಪ್ಪಾ ನಿಂಗೆ?) ಒಂದು ವೇಳೆ ಅವನು ಇಲ್ಲದಿದ್ರೂ ಅವನ ನೆನಪಿಗೆ ಮಕ್ಕಳಿರ್‍ತವಲ್ಲ, ಆ ನಿನ್ನ ಮೊಮ್ಮಕ್ಕಳೊಂದಿಗೇ ನಿನ್ನೆಡೆಗೆ ಓಡಿ ಬರ್‍ತೀನಿ. ಚಿಕ್ಕಂದಿನಿಂದ ಗಿಣಿಮರಿಯ ಥರಾ ಬೆಳೆಸಿದ್ದು ನೀನು. ಅಂಥ ನಿನಗೆ ಒಂದು ಮಾತೂ ಹೇಳದೆ ಬಂದು ಬಿಟ್ಟೆ. ಕ್ಷಮಿಸಿಬಿಡಪ್ಪಾ... ಪ್ಲೀಸ್.ನಿನ್ನ ಮುದ್ದಿನ ಮಗಳು- ಶ್ವೇತಾ
*****
ಪತ್ರ ಓದಿ ಮುಗಿಸಿದ ಗೋಪಾಲರಾವ್ ಸಂಪೂರ್ಣ ಬೆವೆತು ಹೋಗಿದ್ದ. ಮುದ್ದಿನ ಮಗಳನ್ನು ಸಾಕಿದ್ದು, ಆಡಿಸಿದ್ದು, ಗದರಿಸಿದ್ದು, ಕಥೆ ಹೇಳಿದ್ದು, ಉಯ್ಯಾಲೆಯಲ್ಲಿ ಜೀಕಿದ್ದು, ತುತ್ತು ಕೊಟ್ಟಿದ್ದು... ಎಲ್ಲವೂ ಅವನಿಗೆ ಒಂದೊಂದಾಗಿ ನೆನಪಾಯಿತು. ಈಗ ಏನು ಮಾಡಬೇಕು ಎಂದು ತೋಚದೆ ಆತ ತಬ್ಬಿಬ್ಬಾಗಿ ನಿಂತಿದ್ದಾಗಲೇ ಆ ಪತ್ರದ ಕೆಳಗೆ, P.S.u. ಎಂದು ಬರೆದಿದ್ದೂ ಕಾಣಿಸಿತು. ಶಿವನೇ, ಇನ್ನೂ ಯಾವ ಕೆಟ್ಟ ಸುದ್ದಿ ಓದಬೇಕೋ ಎಂದುಕೊಂಡು ಗೋಪಾಲರಾಯರು ನಡುಗುತ್ತಲೇ ಆ ಪತ್ರ ತಿರುಗಿಸಿದರು. ಅಲ್ಲಿ ಹೀಗಿತ್ತು:ಅಪ್ಪಾ, ಈವರೆಗೆ ನೀನು ಓದಿದೆಯಲ್ಲ,ಅದಷ್ಟೂ ಓಳು. ದೊಡ್ಡ ಸುಳ್ಳು! ನಮ್ಮ ಸ್ಕೂಲ್‌ನಲ್ಲಿ ಕೊಡುವ ಪ್ರೋಗ್ರೆಸ್ ರಿಪೋರ್ಟ್ ಇದೆಯಲ್ಲ, ಅದಕ್ಕಿಂತ ಕೆಟ್ಟ ಸಂಗತಿಗಳು ಅದೆಷ್ಟೋ ಇವೆ ಅಂತ ನಿನಗೆ ನೆನಪು ಮಾಡಿಕೊಡಲು ಸುಮ್ನೇ ಹೀಗೆಲ್ಲಾ ಬರೀಬೇಕಾಯ್ತು. ಮತ್ತೆ ಹೇಳ್ತಿದೀನಿ. ಇದೆಲ್ಲಾ ಸುಳ್ಳು. ಅಲ್ಲೇ ಟೇಬಲ್ ಕೆಳಗೆ ನನ್ನ ಪ್ರೋಗ್ರೆಸ್ ರಿಪೋರ್ಟ್ ಇದೆ. ನೋವಿನ ವಿಚಾರ ಏನೆಂದರೆ, ನಾನು ಸಿ' ಗ್ರೇಡ್ ಬಂದಿದೀನಿ. ಸ್ಸಾರಿ, ಮುಂದಿನ ತಿಂಗಳು ಎ' ಗ್ರೇಡೇ ಬರ್‍ತೀನಿ. ಈಗ ಅದಕ್ಕೆ ಸಹಿ ಹಾಕು. ಪ್ಲೀಸ್, ಅಮ್ಮನ ಜತೆ ಜಗಳ ಆಡಬೇಡ. ಇಲ್ಲೇ ಪಕ್ಕದ ಮನೆ ಆಂಟಿ ಹತ್ರ ಗೋರಂಟಿ ಹಾಕಿಸಿಕೊಳ್ತಾ ಇದೀನಿ. ನೀನು ಬೈಯೋದಿಲ್ಲ ಅಂತಾದ್ರೆ ಸುಮ್ನೇ ಒಂದ್ಸಲ ಕೂಗು, ಓಡಿ ಬರ್‍ತೀನಿ. ನಿಂಗೊತ್ತಾ ಅಪ್ಪಾ, ಐ ಲವ್ ಯು ವೆರಿ ವೆರಿ ಮಚ್. ನಿನ್ನ ತುಂಟ ಮಗಳು- ಶ್ವೇತಾ.
ಮಗಳ ಜಾಣತನದ ಬಗ್ಗೆ ಹೆಮ್ಮೆಯೂ; ತನ್ನ ಅನುಮಾನದ ಬಗ್ಗೆ ನಾಚಿಕೆಯೂ ಒಮ್ಮೆಗೇ ಆಯಿತು ಗೋಪಾಲರಾವ್‌ಗೆ. ಆತ ಮೇಲಿಂದ ಮೇಲೆ ಭಾವುಕನಾದ. ಒಂದು ಪತ್ರದ ಮೂಲಕ ತನ್ನ ಯೋಚನೆಯ ಮಟ್ಟವನ್ನೇ ಬದಲಿಸಿದ ಮಗಳನ್ನು ನೆನೆದು ಅವನಿಗೆ ಖುಷಿ ಹೆಚ್ಚಾಯಿತು. ಗಂಟಲು ಉಬ್ಬಿ ಬಂತು. ಉಕ್ಕಿ ಬಂದ ಕಂಬನಿ ಒರೆಸಿಕೊಂಡು ಸ್ವಲ್ಪ ಗಟ್ಟಿಯಾಗಿ ಶ್ವೇತಾ' ಎಂದು ಕರೆದ...
ಹೇಳಿ ಕೇಳಿ ಇದು ಪರೀಕ್ಷೆ ಶುರುವಾಗುವ ಸಮಯ. ಪ್ರಿಪರೇಟರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ತಗೊಂಡು ಮುಖ ತೋರಿಸದೆ ಒದ್ದಾಡಿ ಹೋಗುವ ಮಕ್ಕಳನ್ನು ಬೈಬೇಡಿ. ಸುಮ್ಮನೇ ಅನುಮಾನಿಸಬೇಡಿ ಎಂದು ಎಲ್ಲ ಪೋಷಕರಿಗೂ ಹೇಳಬೇಕು ಅನಿಸಿದ್ದರಿಂದ ಈ ಕತೆ ಮತ್ತು ಪತ್ರ ಸೃಷ್ಟಿಯಾಯಿತು. ಉಳಿದಂತೆ ಎಲ್ಲವೂ ಮಾಮೂಲು. ನಮಸ್ಕಾರ!
0 Comments