ಕಾಲು ಬಾಯಿ ಜ್ವರ
- ರೋಗ ಲಕ್ಷಣಗಳು ಯಾವವು ?
- ಈ ರೋಗ ಹೇಗೆ ಹರಡುತ್ತದೆ?
- ರೋಗ ಬಂದುಹೋದ ನಂತರದ ಅಡ್ಡ ಪರಿಣಾಮಗಳು:
- ಈ ರೋಗವನ್ನು ಹೇಗೆ ನಿಯಂತ್ರಿಸಬೇಕು?
ಕಾಲು ಬಾಯಿ ರೋಗವು ಗೊರಸು ಕಾಲುಗಳುಳ್ಳ ಪ್ರಾಣಿಗಳಾದ ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಬರುವ ಸಾಂಕ್ರಾಮಿಕ ರೋಗ. ಇದು ನಮ್ಮ ದೇಶದಲ್ಲಿ ಸ್ಥಾನಿಕವಾಗಿದ್ದು, ಆಗಾಗ್ಗೆ ಉಲ್ಬಣಗೊಳ್ಳುವುದರಿಂದ ಉತ್ಪಾದನಾ ನಷ್ಟದ ಜೊತೆಗೆ ಜಾನುವಾರು ಉತ್ಪನ್ನಗಳ ರಫ್ತಿನ ಮೇಲಿನ ನಿಷೇಧದಿಂದಾಗಿ ತೀವ್ರ ಆರ್ಥಿಕ ನಷ್ಟವನ್ನುಂಟು ಮಾಡುತ್ತಿದೆ.
ರೋಗ ಲಕ್ಷಣಗಳು ಯಾವವು ?
- ಹಾಲಿನ ಇಳುವರಿಯಲ್ಲಿ ಕುಸಿತ
- ಪಾದ (ಗೊರಸು), ಬಾಯಿ ಮತ್ತು ಕೆಚ್ಚಲಿನ ಮೇಲೆ ನೀರು ಬೊಬ್ಬೆಗಳು
- ಪರಿಣಾಮ ಬಾಯಿಯಿಂದ ಜೊಲ್ಲು ಸೋರುವಿಕೆ ಮತ್ತು ಕುಂಟುವಿಕೆ
ಬಾಯಿಯಲ್ಲಿ ರೋಗದ ಲಕ್ಷಣಗಳು
ನಾಲಿಗೆ ಹಾಗೂ ವಸಡುಗಳ ಮೇಲಿನ ಗುಳ್ಳೆಗಳು ಒಡೆದು ಮೇಲ್ಪದರು ಕಿತ್ತು ಅಲ್ಸರ್ ರೀತಿಯ ಗಾಯಗಳಾಗುತ್ತವೆ. ಜೊಲ್ಲು ಸೋರುವಿಕೆ ಮತ್ತು ಆಹಾರ ತಿನ್ನಲು ತೊಂದರೆ ಅನುಭವಿಸುತ್ತದೆ
ಈ ರೋಗ ಹೇಗೆ ಹರಡುತ್ತದೆ?
- ರೋಗಜನಕ ವೈರಾಣು ಜಾನುವಾರಿನ ಜೊಲ್ಲು ಮತ್ತು ವಿಸರ್ಜಿತ ದ್ರವಗಳು, ಹಾಲಿನ ಮೂಲಕವೂ ಹೊರಸೂಸುತ್ತದೆ.
- ಈ ರೀತಿ ಹೊರಬಂದ ವೈರಾಣು ಸುಲಭವಾಗಿ ತೇವ ಮಿಶ್ರಿತ ಗಾಳಿ ಮೂಲಕ ಸ್ಥಳದಿಂದ ಸ್ಥಳಕ್ಕೆ ಪ್ರಸರಿಸುತ್ತದೆ
- ರೋಗಪೀದಿತ ಜಾನುವಾರುಗಳ ಸಂಪರ್ಕ, ಕೊಟ್ಟಿಗೆ ಕೆಲಸಗಾರರು, ಮೇವು ಮತ್ತು ನೀರಿನ ಮೂಲಕವೂ ಹಾಗೂ ಇತರೇ ಸಾಕು ಪ್ರಾಣಿಗಳಾದ ನಾಯಿ/ಬೆಕ್ಕು ಗಳ ಚಲನವಲನದ ಮೂಲಕವೂ ಹರಡುತ್ತದೆ.
- ರೋಗ ಪೀಡಿತ ಕುರಿ ಮತ್ತು ಹಂದಿಗಳಿಂದ ವೈರಾಣು ಅತ್ಯಧಿಕ ಪ್ರಮಾಣದಲ್ಲಿ ವಿಸರ್ಜಿತವಾಗಿ ರೋಗ ಹರಡುತ್ತದೆ
- ಮಿಶ್ರತಳಿ ರಾಸುಗಳು ಸ್ಥಳೀಯ ತಳಿಗಳಿಗಿಂತ ಅಧಿಕವಾಗಿ ರೋಗಕ್ಕೆ ತುತ್ತಾಗುತ್ತವೆ.
- ರೋಗಪೀಡಿತ ಜಾನುವಾರುಗಳ ಸಾಗಾಣಿಕೆಯಿಂದಲೂ ಸ್ಥಳದಿಂದ ಸ್ಥಳಕ್ಕೆ ಹರಡುತ್ತದೆ.
ರೋಗ ಬಂದುಹೋದ ನಂತರದ ಅಡ್ಡ ಪರಿಣಾಮಗಳು:
ರೋಗಕ್ಕೆತುತ್ತಾದ ಜಾನುವಾರುಗಳು ಜೀವಿತ ಅಸ್ಥಿಪಂಜರದಂತಾಗಿ ಅವುಗಳಿಗೆ ಕೆಚ್ಚಲು ಬಾವು, ಗರ್ಭಪಾತ, ಗರ್ಭ ಧರಿಸದಿರುವಿಕೆ, ತೀಕ್ಷ್ಣವಾಗಿಇಳಿಮುಖವಾದ ಹಾಲು ಉತ್ಪಾದನೆ, ಕುಂಠಿತಗೊಂಡ ಬಿಸಿಲು ಧಾರಣ ಶಕ್ತಿ, ಇತ್ಯಾದಿಗಳು ಉಲ್ಬಣಿಸುತ್ತವೆ.
ಈ ರೋಗವನ್ನು ಹೇಗೆ ನಿಯಂತ್ರಿಸಬೇಕು?
- ರೋಗಲಕ್ಷಣ ಹೊಂದಿದ ಜಾನುವಾರುಗಳನ್ನು ತಕ್ಷಣ ಪ್ರತ್ಯೇಕಿಸಬೇಕು.
- ಕೊಟ್ಟಿಗೆಯನ್ನು ಅಡಿಗೆ ಸೋಡ ದ್ರಾವಣದಿಂದ ತೊಳೆಯಬೇಕು
- ಆರೋಗ್ಯವಂತ ಜಾನುವಾರುಗಳನ್ನು ರೋಗಪೀಡಿತ ಪ್ರದೇಶಗಳಿಗೆ ಸಾಗಿಸಬಾರದು
- ಪೀಡಿತ ಪ್ರದೇಶಗಳಿಂದ ಜಾನುವಾರುಗಳನ್ನು ಖರೀದಿಸಬಾರದು
- ಹೊಸದಾಗಿ ಖರೀದಿಸಿದ ಜಾನುವಾರುಗಳನ್ನು ಫಾರ್ಮ್ ನಲ್ಲಿನ ಇತರೇ ಜಾನುವಾರಗಳೊಡನೆ ಕನಿಷ್ಟ 21 ದಿನಗಳವರೆಗೆ ಬೆರೆಯಲು ಬಿಡದೇ ಪ್ರತ್ಯೇಕವಾಗಿರಿಸಬೇಕು
ಚಿಕಿತ್ಸೆ
- ರೋಗ ಪೀಡಿತ ದನಗಳ ಬಾಯಿ ಮತ್ತು ಗೊರಸುಗಳನ್ನು ಶೇ 1 ರ ಪೊಟ್ಯಾಶಿಯಂ ಪರ್ಮಾಂಗನೇಟ್ ದ್ರಾವಣದಿಂದ ತೊಳೆದು ಅಂಟಿಸೆಪ್ಟಿಕ್ ಲೋಶನ್ ನ್ನು ಲೇಪಿಸಬೇಕು. ಬಾಯಿಯ ಹುಣ್ಣುಗಳಿಗೆ ಬೋರಿಕ್ ಅಸಿಡ್ ಮತ್ತು ಗ್ಲಿಸರಿನ್ ಮಿಶ್ರಣ ಲೇಪಿಸಬೇಕು.
- ರೋಗ ಪೀಡಿತ ಜಾನುವಾರುಗಳಿಗೆ ರುಚಿಕಟ್ಟಾದ ಮತ್ತು ಮೆತ್ತಗಿನ ಆಹಾರ ನೀಡಿ ಬೇರೆ ದನಗಳಿಂದ ಬೇರ್ಪಡಿಸಿ ಉಪಚರಿಸಬೇಕು.
ರೋಗನಿರೋಧಕ ಲಸಿಕೆ ವಿಧಾನ
- ದನಗಳು, ಕುರಿ, ಆಡು ಮತ್ತು ಹಂದಿಗಳಿಗೆ ಪ್ರತೀ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಬೇಕು.
- ಬೇಸಿಗೆ (ಎಪ್ರಿಲ್/ಮೇ) ಹಾಗೂ ಚಳಿಗಾಲ (ಅಕ್ಟೋಬರ್/ನವ್ಹೆಂಬರ್) ಗಳಲ್ಲಿ ಹಾಕಿಸುವುದುಸೂಕ್ತ
- ಕರುಗಳಿಗೆ ಮೊದಲನೆಯ ಸಲ 4 ತಿಂಗಳಾದಾಗ, ನಂತರ 5 ನೆಯ ತಿಂಗಳಿಗೆ, ತದನಂತರ ಪ್ರತೀ 6 ತಿಂಗಳಿಗೊಮ್ಮೆ ವೃಧ್ಧಿತ ಪರಿಮಾಣವನ್ನು ನೀಡಬೇಕು
0 Comments