Ticker

6/recent/ticker-posts

ಹಸುಗಳಲ್ಲಿ ಮಾರಕ ಉಣ್ಣೆ ರೋಗ; ಉದಾಸೀನ ಬೇಡ

ಹಸುಗಳಲ್ಲಿ ಮಾರಕ ಉಣ್ಣೆ ರೋಗ; ಉದಾಸೀನ ಬೇಡ

ಮೊದಲು ನಮ್ಮ ದೇಶಿ ದನ ಮತ್ತು ಎಮ್ಮೆಗಳಿಗೆ ಈ ಕಾಯಿಲೆ ಬರಲ್ಲ ಎಂದಿತ್ತು. ಈಗ ಎಮ್ಮೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ.. ಈ ರೋಗ ಪತ್ತೆ ಹಚ್ಚಲು ರೋಗ ಸಂಶಯಿತ ಜಾನುವಾರಿನ ರಕ್ತ ಪ್ರಸರಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದರೆ ಪತ್ತೆಹಚ್ಚಬಹುದು. ಆದರೆ ಈ ಸೂಕ್ಷ್ಮಾಣು ಎಂಥಾ ಚಾಲಾಕಿ ಎಂದರೆ ಪ್ರಾಣಿಗೆ ಆಕ್ಸಿಟೆಟ್ರಾಸೈಕ್ಲಿನ್ ಇತ್ಯಾದಿ ಔಷಧಿಗಳಿಂದೇನಾದರೂ ಚಿಕಿತ್ಸೆ ನೀಡಿದಲ್ಲಿ ರಕ್ತ ಪ್ರಸರಣದಲ್ಲಿ ಸಿಗುವುದೇ ಇಲ್ಲ!. ದುಗ್ಧ ಗ್ರಂಥಿಗಳಲ್ಲಿ ಸೇರಿಕೊಂಡು ರಕ್ತದಲ್ಲಿ ನಾಪತ್ತೆಯಾಗುತ್ತದೆ. ನಂತರ ರಕ್ತ ಪ್ರಸರಣದಲ್ಲಿ ರೋಗಾಣು ಕಂಡು ಬರುವುದೇ ಇಲ್ಲ. ಇದನ್ನು ಬಿಟ್ಟರೆ ಉತ್ತಮ ರೋಗ ಪತ್ತೆ ಪದ್ದತಿಗೆ ಸಂಶೋಧನೆಗಳು ನಡೆಯುತ್ತಿವೆ





ಡಾ: ಎನ್.ಬಿ.ಶ್ರೀಧರ, ಪಶುವೈದ್ಯರು

ಎಪ್ರಿಲ್ ಮಧ್ಯ ವಾರ. ಸುಡು ಬಿಸಿಲು ಹೊರಗೆ. ಆ ದಿನ ಸರ್ಕಾರಿ ರಜೆ. ರಜೆ ಎಂದ ಕೂಡಲೇ ಪಶು ಆಸ್ಪತ್ರೆಗಳು ಬಂದ್ ಆಗಿ ಬಿಡುತ್ತವೆಯಾ ಅಂದು ಕೊಳ್ಳಬೇಡಿ. ಮಧ್ಯಾಹ್ನ ೧೨.೩೦ ಕ್ಕೆ ಬಾಗಿಲು ಹಾಕಬೇಕು. ನಂತರ ನಾರದನಂತೆ ನನ್ನ ಲೋಕ ಸಂಚಾರ ಮನೆ ಮನೆ ಭೇಟಿಗೆ ಪ್ರಾರಂಭವಾಗುತ್ತದೆ ಗ್ರಾಮೀಣ ಭಾಗದ ಪಶುವೈದ್ಯರದು್ ಬಹುತೇಕ ಇದೇ ಪರಿಸ್ಥಿತಿ. ನಮ್ಮ ಜವಾನನೂ ಏನೋ ಕೆಲಸವಿದೆ ಎಂದು ಆ ದಿನ ರಜೆ ಹಾಕಿದ್ದ. ಏಕೋಪಾಧ್ಯಾಯ ಶಾಲೆಯಂತೆ “ಏಕ ಪಶುವೈದ್ಯ ಚಿಕಿತ್ಸಾಲಯ” ದ ಕಸ ಎಲ್ಲಾ ಹೊಡೆದು ಬಾಗಿಲು ತೆಗೆದು ಸ್ಟರಿಲೈಜರಿನಲ್ಲಿರುವ ನೀರು ಬಿಸಿ ಮಾಡಲು ಇಟ್ಟು ಆಸ್ಪತ್ರೆಯ ಶುಭಾರಂಭ ಮಾಡಿದೆ.
ಆ ದಿನ ಕೇಸುಗಳು ಕಡಿಮೆ ಇದ್ದವು. ದೂರವಾಣಿ ಕರೆಗಳ ವಿಸಿಟ್ಟುಗಳು ಒಂದೆರಡಿದ್ದವು. ಅವೂ ತುರ್ತು ಅಲ್ಲ. ಬಹಳ ದಿನಗಳ ನಂತರ ವಿರಾಮ ಸಿಕ್ತಲ್ಲ ಎಂದುಕೊಂಡು ಅನೇಕ ದಿನಗಳಿಂದ ತಂದಿಟ್ಟುಕೊಂಡ ಭೈರಪ್ಪನವರ “ಪರ್ವ” ಕಾದಂಬರಿ ಓದಲು ಪ್ರಾರಂಭಿಸಿದೆ. ‘ಪರ್ವ’ದ ಭೀಷ್ಮ ಮತ್ತು ದ್ರೋಣರು, ಕೌರವ ಸೇನಾಪತಿಯಾದರೂ, ರೊಟ್ಟಿ ತಿನ್ನಲಾಗದ, ನಡೆಯಲು ಕಷ್ಟಪಡುವ ಮುದುಕರು. ಕೃಷ್ಣ ಅತಿ ಬುದ್ಧಿವಂತ ರಾಜಕಾರಣಿ. ವಾಸ್ತವಕ್ಕೆ ಎಷ್ಟು ಹತ್ತಿರಕ್ಕೆ ಬರಲು ಸಾಧ್ಯ ಎನ್ನುವುದು ಅವರ ಪ್ರಯತ್ನ ಮನಸೆಳೆಯುತ್ತಿತ್ತು. ಓದುತ್ತಾ ಓದುತ್ತಾ ಅದರಲ್ಲಿ ಲೀನನಾಗಿ ಬಿಟ್ಟೆ.
“ಸಾರ್.ಸಾರ್.. ಎಂಬ ಶಬ್ಧ ಎಲ್ಲಿಂದಲೋ ಆಳದ ಬಾವಿಯಾಳದಿಂದ ಕೇಳಿದ ಹಾಗೇ ಅನಿಸಿತು. ಸಮೀಪದ ಹಳ್ಳಿಯ ಗೋಪಾಲಕನ ಸ್ವರ. “ಸಾರ್. ಹಸು ತಂದೀದ್ದಿನಿ. ಜ್ವರ ಬಂದಿದೆ. ನಿಮ್ ಆಶಿರ್ವಾದದಿಂದಾನೇ ನಾನ್ ಬದ್ಕಿರೋದು. ಇಂಜೆಕ್ಷನ್ ಹಾಕ್ಸೋಣ ಎಂದು ಬಂದೆ” ಎಂದ ಆತ. ಜಾಸ್ತಿನೇ ಪ್ರಶಂಸೆ ಆತನದು. ಮನೆ ಮನೆಗೆ ಮೀನು ಮಾರಿ ಬದುಕುತ್ತಿದ್ದ ಆತನಿಗೆ ಒಂದು ಆಕಳು ಕೊಡಿಸಿದ್ದೆ. ಆತ ಈಗ ೫ ಆಕಳುಗಳ ಒಡೆಯನಾಗಿ ಎಲ್ಲರ ಮನೆಗೆ ಹಾಲು ಹಾಕಿ, ಆರ್ಥಿಕವಾಗಿ ಚೇತರಿಸಿಕೊಂಡು ಎಲ್ಲರ ವಿಶ್ವಾಸ ಗಳಿಸಿದ್ದ. ಹಸುಗಳ ಜ್ವರ ನೋಡಲು ಥರ್ಮಾಮೀಟರ್, ಪ್ರಥಮೋಪಚಾರದ ಕಿಟ್ ಇತ್ಯಾದಿ ನೀಡಿದ್ದೆ. ಅದರಿಂದ ಆಗಾಗ ಆತ ಇದಕ್ಕೆಲ್ಲಾ ನನ್ನನ್ನು ಹೊಣೆಗಾರನನ್ನಾಗಿ ಮಾಡಿ ನನ್ನನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವುದಿತ್ತು.
ನಾನು ದನದ ಪರೀಕ್ಷೆ ಮಾಡುತ್ತಾ “ಜ್ವರ ನೋಡಿದ್ದಿರಾ, ಎಷ್ಟಿದೆ?” ಎಂದೆ. “ನೋಡಿದೆ ಸಾರ್. ಥರ್ಮ್ಮಾಮೀಟರ್ ತುಂಬೆಲ್ಲಾ ಕಾಣಿಸ್ತು. ಗೊತ್ತಾಗ್ಲಿಲ್ಲ. ಅದಕ್ಕೆ ಇಲ್ಲೇ ತಂದೆ” ಎಂದ.ಜ್ವರ ಪರೀಶೀಲಿಸಿದೆ. ಅದು ೧೦೬ ಡಿಗ್ರಿ ಇತ್ತು. ಮೈ ಎಲ್ಲಾ ಸುಡುತ್ತಿತ್ತು. ಕುತ್ತಿಗೆ ಹತ್ತಿರದ ದುಗ್ಧ ಗ್ರಂಥಿಗಳೆಲ್ಲಾ ಊದಿಕೊಂಡಿದ್ದವು. ಕಣ್ಣು ರೆಪ್ಪೆ ತೆರೆದರೆ ಹಲಸಿನ ಸಾರೆ ಹಾಗೆ ಬಿಳಿಚಿ ಹೋಗಿತ್ತು. ನನ್ನ ಅನುಭವದಲ್ಲಿ ಅದು “ಥೈಲೆರಿಯೋಸಿಸ್” ಕಾಯಿಲೆ ಆಗಿತ್ತು. ರಕ್ತ ಪ್ರಸರಣದ ಮಾದರಿ ತೆಗೆದು ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ಯಾರಾಸೈಟಾಲಜಿ ವಿಭಾಗಕ್ಕೆ ಕಳಿಸಲು ತೆಗೆದಿರಿಸಿದೆ. ದನಕ್ಕೆ ಆಸ್ಪತ್ರೆಯಲ್ಲಿ ಜೋಪಾನವಾಗಿರಿಸಿದ ದುಬಾರಿ ಔಷಧದ ಚುಚ್ಚುಮದ್ದು ನೀಡಿ ಚಿಕಿತ್ಸೆ ಮಾಡಿ ಕಳಿಸಿದೆ. ಸಂಜೆಯೇ ದನಕ್ಕೆ ಜ್ವರ ಕಡಿಮೆಯಾಗಿ ಮೇವು ತಿನ್ನಲು ಪ್ರಾರಂಭವಾಗಿದೆ ಎಂಬ ವರದಿ ಬಂತು.


ನಾನು ರಕ್ತ ಪ್ರಸರಣದ ಮಾದರಿಯನ್ನು ಸರಿಯಾಗಿ ಪ್ಯಾಕ್ ಮಾಡಿ ಬೆಂಗಳೂರಿಗೆ ಕಳಿಸುವ ವ್ಯವಸ್ಥೆ ಮಾಡಿಕೊಳ್ಳಲಾರಂಭಿಸಿದೆ. ಅಷ್ಟರಲ್ಲೇ ಪುನ: ನಮ್ಮ ಸ್ನೇಹಿತ ಗೋಪಾಲಕನ ದರ್ಶನವಾಯಿತು. ನನಗೋ ಗಾಬರಿ. ಏನಾಯಿತು? ಹಸು ಹುಶಾರಿದೇ ತಾನೇ? ಎಂದೆ. ಹಸು ಚೆನ್ನಾಗಿದೆ ಸಾರ್. ಅದೇನೋ ಥೈಲೇರಿಯೋಸಿಸ್ ಕಾಯಿಲೆ ಅಂದ್ರಲ್ಲಾ. ಅದರ ಬಗ್ಗೆ ತಿಳ್ಕಂಡು ಹೋಗೋಣ ಅಂತ ಬಂದೆ” ಎಂದ ಆತ. ಸಂಗಡ ನನ್ನ ಇಷ್ಟದ “ ಮಂಡಕ್ಕಿ ಖಾರಾ” ಸಹ ಜೊತೆಯಲ್ಲಿತ್ತು. ಇನ್ನೇನು? ಬೇಕು. ಶುರು ಮಾಡಿದೆ. ಪೊಟ್ಟಣದಲ್ಲಿದ್ದ ಮಂಡಕ್ಕಿಯನ್ನು ಟೇಬಲ್ಲಿನ ಮೇಲಿನ ಪೇಪರ್ರಿನಲ್ಲಿ ಹಾಕುತ್ತಾ ಮತ್ತು ಹಳದಿ ಬಣ್ಣದ ಖಾರಾ ಬೂಂದಿಯಿಂದ ಅಲಂಕಾರ ಮಾಡುತ್ತಾ ಆತನ ಜಾನುವಾರಿಗೆ ಸಿಕ್ಕಾ ಪಟ್ಟೆ ಜ್ವರ ನೋಡಿದ ಕಾರಣವೋ ಏನೋ “ಅಲ್ಲಾ ಸಾರ್. ಈ ಕಾಯಿಲೆಯಲ್ಲಿ ಅಷ್ಟೆಲ್ಲಾ ಜ್ವರ ಯಾಕೆ ಬರುತ್ತೆ?” ಎಂದ
ನಾನು ಒಂದೊಂದೇ ಮುಷ್ಟಿ ಮಂಡಕ್ಕಿ ಖಾರದ ರುಚಿಕರ ಮಿಶ್ರಣವನ್ನು ಬಾಯಿಗೆ ಹಾಕುತ್ತಾ “ ಥೈಲೇರಿಯಾಸಿಸ್ ಎಂಬ ಕಾಯಿಲೆಯು ನಮ್ಮ ಜಾನುವಾರುಗಳಲ್ಲಿ “ಥೈಲೇರಿಯಾ ಅನುಲೆಟಾ” ಎಂಬ ಏಕಾಣು ಪರೋಪಜೀವಿಯಿಂದ ಬರುತ್ತದೆ. ಇದು ಆಫ್ರಿಕಾದಲ್ಲಿ ಕಂಡು ಬಂದಿರುವುದರಿಂದ ಇದಕ್ಕೆ “ಈಸ್ಟ್ ಕೋಸ್ಟ್ ಫ಼ಿವರ್” ಎಂದೂ ಕರೆಯುತ್ತಾರೆ. ಇದು ಅತ್ಯಂತ ತೀವ್ರವಾಗಿ ಎಮ್ಮೆಗಳಿಂದ ದನಗಳಿಗೆ ಬಂದರೆ “ಕಾರೀಡಾರ್ ರೋಗ” ಎಂದೂ,ಚಳಿಗಾಲದಲ್ಲಿ ಕಂಡು ಬಂದರೆ ”ಜನವರಿ” ರೋಗವೆಂದೂ ಝಿಂಬಾಂಬ್ವೆ ಭಾಗದಲ್ಲಿ ಕರೆಯುವುದು ವಾಡಿಕೆ. ಈ ರೋಗಾಣುಗಳು ಸಾಮಾನ್ಯವಾಗಿ ಕೆಂಪು ರಕ್ತಗಳಲ್ಲಿ ಇರುತ್ತವೆ.


ಈ ರೋಗವನ್ನು ಒಂದು ಜಾನುವಾರುವಿನಿಂದ ಮತ್ತೊಂದು ಜಾನುವಾರುವಿಗೆ ಹರಡುವುದರಲ್ಲಿ ಉಣ್ಣೆಗಳ ಪಾತ್ರ ಬಹಳ ಮುಖ್ಯ. ಈ ಸೂಕ್ಷ್ಮಾಣು ರಕ್ತ ಕಣಗಳನ್ನೇ ಹೊಕ್ಕು ಅವುಗಳಲ್ಲಿನ ಹಿಮೋಗ್ಲೋಬಿನ್ ಹಾಳುಗೆಡುವುದರಿಂದ ರಕ್ತ ಹೀನತೆ ಯಾಗುತ್ತದೆ. ಈ ಪರೋಪಜೀವಿಗಳು ದನದ ಶರೀರದ ಬಿಳಿರಕ್ತ ಕಣಗಳಿಗೆ ಹೊರ ಜೀವಿಗಳಾಗಿ ಕಾಣುವುದರಿಂದ ಇವನ್ನು ನಾಶ ಮಾಡಲು ಅವು ಹೋರಾಟ ಪ್ರಾರಂಭಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಪೈರೋಜನ್ ಎಂಬ ವಸ್ತು ಉತ್ಪಾದನೆಯಾಗಿ ಶರೀರದ ತಾಪಮಾನವನ್ನು ಹೆಚ್ಚಿಸಿ ಪರೋಪಜೀವಿಗಳನ್ನು ಸಾಯಿಸಲು ಪ್ರಯತ್ನಿಸುತ್ತದೆ. ಶರೀರವು ತನ್ನನ್ನು ರಕ್ಷಣೆ ಮಾಡಿಕೊಳ್ಳುವ ಕ್ರಿಯೆಯಲ್ಲಿ ಈ ಜ್ವರವೂ ಒಂದು. ಆದರೆ ಇದು ತುಂಬಾ ಜಾಸ್ತಿಯಾದರೆ ತೊಂದರೆಯಾಗುತ್ತದೆ” ಎಂದೆ.
ಇಷ್ಟೊತ್ತಿಗೆ ಆಸ್ಪತ್ರೆಯೂ ರಜೆಯ ದಿನವೂ ತೆರೆದಿರುವುದು ಕಂಡು ಪೇಟೆಯ ಕಡೆ ಬಂದಿದ್ದ ಒಂದಿಬ್ಬರು ಜಂತು ಹುಳಕ್ಕೆ ಮತ್ತು ದನದ ಕೆಮ್ಮಿಗೆ “ಖಾರ” ಪಡೆಯಲು ಬಂದರು. ಅವರಿಗೂ ನಮ್ಮ ಸಂಭಾಷಣೆ ಕೇಳಿ ಆಸಕ್ತಿ ಬಂತೇನೋ? ಅವರೂ ಸಂಭಾಷಣೆಯಲ್ಲಿ ಭಾಗಿಯಾದರು. ಅವರಲ್ಲೊಬ್ಬ “ ಡಾಕ್ಟ್ರೇ.. ಈ ಉಣ್ಣೆ ಅಷ್ಟು ಡೇಂಜರ್ರೇ?” ಅಂದ.
ನಾನು “ನೋಡಿ ಈಗ ಬೇಸಿಗೆ. ಬೇಸಿಗೆಯ ಬೇಗೆ ಪ್ರಾರಂಭವಾಗುತ್ತಿದ್ದಂತೆ ಉಣ್ಣೆಗಳ ಕಾಟವೂ ವಿಪರೀತ.ರಕ್ತ ಕುಡಿದು ಸಂತತಿ ಬೆಳೆಸಿಕೊಂಡು ಹಾಳಾಗಿ ಹೋಗಲಿ ಎಂಬಂತಿಲ್ಲ!! ಇವು ಮಾಡುವ ಉಪಟಳ ಒಂದೆರಡಲ್ಲ. ರಕ್ತ ಕುಡಿದು ಜಾನುವಾರಿನ ಜೀವ ಹಿಂಡಿ ರಕ್ತ ಹೀನತೆ ಉಂಟು ಮಾಡುತ್ತವೆ. ಬೇಸಿಗೆಯಲ್ಲಿ ಮೊದಲೇ ಅಹಾರವಿಲ್ಲದೇ ಮೂಳೆ ಚಕ್ಕಳವಾಗುವ ಜಾನುವಾರುಗಳ ಮೈಮೇಲೆ ಇವುಗಳ ಸವಾರಿ ಮತ್ತು ಕಚ್ಚುವಿಕೆಯಿಂದ ನಂಜಾಗಿ ಉಣುಗು ಜ್ವರವೂ ಬರುತ್ತದೆ, ಇದರ ಜೊತೆ ಬಳುವಳಿಯಾಗಿ ಜೊತೆ ಬೆಬೆಸಿಯೋಸಿಸ್, ಅನಾಪ್ಲಾಸ್ಮೋಸಿಸ್ ಮತ್ತು ಥೈಲೇರಿಯಾಸಿಸ್ ಎಂಬ ಮಾರಕ ರೋಗಗಳು ಬೇರೆ!!. ಉಣ್ಣೆಗಳಿಗಿಂತ ಈ ಕಾಯಿಲೆಗಳೇ ಜಾನುವಾರುಗಳಿಗೆ ಮಾರಕ!!. ಬೆಬಿಸಿಯೋಸಿಸ್ ಎಂಬ ಕಾಯಿಲೆಯು ಸಹ ಉಣ್ಣೆಗಳ ಮೂಲಕ ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ಹರಡುವ ಒಂದು ಮಾರಕ ಕಾಯಿಲೆ. ಈ ರೋಗವು ಸಾಮಾನ್ಯವಾಗಿ ದನಗಳಲ್ಲಿ ಅದೂ ಮಿಶ್ರತಳಿಯ ದನಗಳಲ್ಲಿ ಕಂಡು ಬರುತ್ತದೆ. ಈ ಪರೋಪಜೀವಿಗಳು ಕೆಂಪು ರಕ್ತ ಕಣಗಳನ್ನು ನಾಶ ಮಾಡುವುದರ ಮೂಲಕ ರಕ್ತಹೀನತೆಯನ್ನು ಉಂಟುಮಾಡುತ್ತವೆ” ಎಂದೆ.
ಅಷ್ಟೊತ್ತಿಗೆ ರಜೆಯ ಮೇಲೆ ಹೋಗಿದ್ದ ನಮ್ಮ ಜವಾನ ಬಂದು “ ಸಾರ್, ನೀವೊಬ್ರೇ ಇದ್ದೀರಿ ಬಾಗ್ಲು ನೀವೇ ಹಾಕ್ಬೇಕಲ್ಲ. ಅದಕ್ಕೆ ಬಾಗ್ಲು ಹಾಕಿ ಹೋಗೋಣ ಅಂತ ಬಂದೆ ಎಂದ. ನಾನು “ ಬರುವವ ಬಂದಿದ್ದೀಯಾ.. ಒಂದೆರಡು ಕಪ್ಪು ಚಹಾ ಹಾಗೇ ಕಾಂದಾ ಭಜೀನೂ ಎರಡು ಪ್ಲೇಟ್ ಇರ್ಲಿ, ಆಚಾರ್ರ ಹೋಟ್ಲಿಂದ” ಎಂದು ಹಣ ನೀಡಿದೆ. ಆತ ಆಶ್ಚರ್ಯದಿಂದ “ನಮ್ ಸಾರ್ ಯಾವಗಲೂ ಚಾ ಕುಡಿದವ್ರು ಈವತ್ತು ಯಾಕೆ ಕುಡಿತಿದಾರೋ. ಏನೋ ತಲೆ ಬಿಸಿ ಮಾಡ್ಕಂಡಿರಬೇಕು” ಎನ್ನುತ್ತಾ ಸಂಶಯದಿಂದಲೇ ಹೋದ.
ನಾನು ಮುಂದುವರೆಸುತ್ತಾ “ ಈ ಉಣ್ಣೆಗಳಿಂದ ಪ್ರಸರಿಸಲ್ಪಡುವ ರೋಗಗಳಾದ ಥೈಲೆರಿಯೊಸಿಸ್, ಬೆಬೆಸಿಯೋಸಿಸ್ ಹಾಗೂ ಅನಾಪ್ಲಾಸ್ಮೋಸಿಸ್ ಮತ್ತು ನಾಯಿಗಳಲ್ಲಿ ಬರುವ ಎರ್ಲಿಶಿಯೋಸಿಸ್ ಕಾಯಿಲೆಗಳ ರೋಗ ಲಕ್ಷಣಗಳು ಬಹುತೇಕ ಒಂದೇ ಆಗಿರುತ್ತವೆ.”ಎಂದೆ.
ಕಡಿಮೆಯಾಗದ ಜ್ವರ, ಅಹಾರ ತಿನ್ನದಿರುವುದು: ಮಂಕಾಗಿರುವುದು,ನಿಶ್ಶಕ್ತಿ, ಹಾಲಿನ ಇಳುವರಿ ಕಡಿಮೆಯಾಗುವುದು, ರಕ್ತಹೀನತೆಯಿಂದಾಗಿ ಹೆಚ್ಚಿನ ಉಸಿರಾಟ ಇವು ಥೈಲೆರಿಯಾಸಿಸ್ ಮತ್ತು ಅನಾಪ್ಲಾಸ್ಮೋಸಿಸ್ ಕಾಯಿಲೆಯ ಲಕ್ಷಣಗಳಾದರೆ, ಇವುಗಳ ಜೊತೆ ಬೆಬಿಸಿಯೋಸಿಸ್ನಲ್ಲಿ ಕಂಡುಬರುವ ವಿಶೇಷ ಲಕ್ಷಣಗಳೆಂದರೆ ಮೂತ್ರವು ಕಾಫಿ ಡಿಕಾಕ್ಷನ್ ಬಣ್ಣದಂತೆ ಕಂಡುಬರುತ್ತದೆ. ಈ ಎಲ್ಲಾ ಕಾಯಿಲೆಗಳಲ್ಲಿ ಗರ್ಭ ಧರಿಸಿರುವ ರಾಸುಗಳಲ್ಲಿ ಗರ್ಭಪಾತವಾಗುತ್ತದೆ. ಕೆಲವೊಮ್ಮೆ ಪಶುವೈದ್ಯರು ಈ ಕಾಯಿಲೆಗೆ ಚಿಕಿತ್ಸೆ ಮಾಡಿದಾಗ ನೀಡಿದ ಔಷಧಿಯಿಂದಲೇ ಗರ್ಭಪಾತವಾಗಿದೆ ಎಂದು ಭಾವಿಸಿ ಪಶುವೈದ್ಯರ ಜೊತೆ ಜಗಳಕ್ಕೆ ಇಳಿಯುವುದಿದೆ. ಅಲ್ವೇ?” ಅಂದೆ. ಈ ತರದ ಘಟನೆಗಳು ಆಗಿದ್ದು ನೆನಪಾಗಿಯೋ ಏನೋ ಅವರೆಲ್ಲಾ “ಹೌದು ಸಾರ್” ಎಂದರು.

ಈಗ ಅವರಿಗೆ ಥೈಲೆರಿಯಾ ಅವರೆಲ್ಲರ ಜಾನುವಾರುಗಳಿಗೆ ಬಂದಂತೆ ಗಾಬರಿಯಾದರು. ಈ ಹಾಳಾದ ಥೈಲೇರಿಯಾ ಕಾಯಿಲೆ ದನಕ್ಕೆ ಬಂದರೆ ನಮಗೆ ಹ್ಯಾಗೆ ಗೊತ್ತಾಗುತ್ತದೆ?” ಎಂದರು. ಅಷ್ಟೊತ್ತಿಗೆ ಚಹಾ, ಈರುಳ್ಳಿಯಿಂದ ಮಾಡಿದ “ಖಾಂದಾ ಬಜಿ” ಬಂದಿದ್ದನ್ನು ಎಲ್ಲರಿಗೂ ಹಂಚಿ ಚಹಾದ ಬಿಸಿ ಸಿಪ್ಪು ಹೀರುತ್ತಾ “ ಥೈಲೆರಿಯೊಸಿಸ್ನ ವಿಶೇಷ ರೋಗ ಲಕ್ಷಣವೆಂದರೆ ಮಿಶ್ರತಳಿ ರಾಸುಗಳ ದುಗ್ಧ ಗ್ರಂಥಿಗಳಲ್ಲಿ ಊತ ಕಂಡುಬರುವುದು. ಅತಿಯಾದ ಜ್ವರ, ಕಾಮಾಲೆ ಇದರ ಲಕ್ಷಣಗಳು. ಆದರೆ ಇದು ಎಲ್ಲಾ ಜಾನುವಾರುಗಳಲ್ಲಿ ಇರಬೇಕೆಂದೇನೂ ಇಲ್ಲ. ಯಾವ ಚಿಕಿತ್ಸೆಗೂ ಬಗ್ಗದ ಜ್ವರ ಇದ್ದರೆ ಅದು ಥೈಲೆರಿಯಾಸಿಸ್ ಅನ್ನಬಹುದು.
ಮೊದಲು ನಮ್ಮ ದೇಶಿ ದನ ಮತ್ತು ಎಮ್ಮೆಗಳಿಗೆ ಈ ಕಾಯಿಲೆ ಬರಲ್ಲ ಎಂದಿತ್ತು. ಈಗ ಎಮ್ಮೆಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ.. ಈ ರೋಗ ಪತ್ತೆ ಹಚ್ಚಲು ರೋಗ ಸಂಶಯಿತ ಜಾನುವಾರಿನ ರಕ್ತ ಪ್ರಸರಣವನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದರೆ ಪತ್ತೆಹಚ್ಚಬಹುದು. ಆದರೆ ಈ ಸೂಕ್ಷ್ಮಾಣು ಎಂಥಾ ಚಾಲಾಕಿ ಎಂದರೆ ಪ್ರಾಣಿಗೆ ಆಕ್ಸಿಟೆಟ್ರಾಸೈಕ್ಲಿನ್ ಇತ್ಯಾದಿ ಔಷಧಿಗಳಿಂದೇನಾದರೂ ಚಿಕಿತ್ಸೆ ನೀಡಿದಲ್ಲಿ ರಕ್ತ ಪ್ರಸರಣದಲ್ಲಿ ಸಿಗುವುದೇ ಇಲ್ಲ!. ದುಗ್ಧ ಗ್ರಂಥಿಗಳಲ್ಲಿ ಸೇರಿಕೊಂಡು ರಕ್ತದಲ್ಲಿ ನಾಪತ್ತೆಯಾಗುತ್ತದೆ. ನಂತರ ರಕ್ತ ಪ್ರಸರಣದಲ್ಲಿ ರೋಗಾಣು ಕಂಡು ಬರುವುದೇ ಇಲ್ಲ. ಇದನ್ನು ಬಿಟ್ಟರೆ ಉತ್ತಮ ರೋಗ ಪತ್ತೆ ಪದ್ದತಿಗೆ ಸಂಶೋಧನೆಗಳು ನಡೆಯುತ್ತಿವೆ. ಕಾದು ನೋಡಬೇಕು” ಅಂದೆ.
ಇಷ್ಟು ಹೊತ್ತು ನಾನು ತದೇಕಚಿತ್ತದಿಂದ ಹೇಳುತ್ತಿದ್ದುದನ್ನು ಯಾವುದೋ ಲೋಕಕ್ಕೆ ಹೋದವರಂತೆ ಕಣ್ಣುಬಾಯಿ ಬಿಟ್ಟುಕೊಂಡು ಕೇಳುತ್ತಿದ್ದ ಅವರು ನನ್ನ ವಾಗ್ಝರಿ ನಿಲ್ಲುತ್ತಿದ್ದಂತೆ ಒಮ್ಮೆಲೇ ಇಹಲೋಕಕ್ಕೆ ಇಳಿದರು. ಅವರಲ್ಲೊಬ್ಬ ಅವನ ಜಾನುವಾರುಗಳಿಗೆ ಈ ಕಾಯಿಲೆಯ ಎಲ್ಲಾ ಲಕ್ಷಣಗಳನ್ನು ಅವರೋಹಿಸಿಕೊಂಡು “ ಹಾಗಿದ್ರೆ ಇದಕ್ಕೆ ಚಿಕಿತ್ಸೆ ಇದೆಯೇ”? ನಾಣು ಎರ್ಡು ಜರ್ಸಿ ಹಸು ಸಾಕಿದ್ದೇನೆ ” ಅಂದ.
ನಾನು ಎರಡು ಈರುಳ್ಳಿ ಬಜಿಯ “ಪೀಸು”ಗಳನ್ನು ಬಾಯಿಗೆ ಹಾಕಿಕೊಂಡು “ಥೈಲೇರಿಯಾಸಿಸ್ಸಿಗೆ ತಜ್ಞ ಪಶುವೈದ್ಯರು ಪ್ರಾರಂಭಿಕ ಹಂತದಲ್ಲಿ ಉತ್ತಮ ಚಿಕಿತ್ಸೆಯನ್ನು ಮಾಡಬಲ್ಲರಾದರೂ ಚುಚ್ಚುಮದ್ದು ಬಹಳ ದುಬಾರಿಯಿದೆ. ಬೆಬೇಸಿಯಾಸಿಸ್ ಮತ್ತು ಅನಾಪ್ಲಾಸ್ಮೋಸಿಸ್ ಕಾಯಿಲೆಗಳಿಗೂ ಸಹ ಒಳ್ಳೆಯ ಔಷಧಿಗಳಿವೆ. ಆದರೆ ಎಲ್ಲವೂ ಪ್ರಾರಂಭಿಕ ಹಂತದಲ್ಲಿ ಮಾತ್ರ ಪರಿಣಾಮಕಾರಿ. ಕಾಯಿಲೆಗಿಂತ ಕಾಯಿಲೆಯಿಂದ ಆಗುವ ರಕ್ತ ಹೀನತೆಯ ಚಿಕಿತ್ಸೆ ಕಷ್ಟ. ರಕ್ತ ಹೀನತೆಗೆ ಕಬ್ಬಿಣದ ಗುಳಿಗೆ ಚುಚ್ಚುಮದ್ದು ನೀಡಿದರೂ ಇದರಿಂದ ರಕ್ತ ಕಣ ತಯಾರಾಗಲು ಕೆಲವು ದಿನಗಳೇ ಬೇಕು. ಕೂಡಲೆ ಭಾಧಿತ ದನ ಉಳಿಸಬೇಕೆಂದರೆ ರಕ್ತ ವರ್ಗಾವಣೆಯಿಂದ ಮಾತ್ರ ಸಾಧ್ಯ. ರಕ್ತ ವರ್ಗಾವಣೆ ಈಗ ಕಷ್ಟ ಸಾಧ್ಯವೇನೂ ಅಲ್ಲ. ಒಂದು ಉತ್ತಮ ರಕ್ತವುಳ್ಳ ದಾನಿ ಹಸು, ಒಂದಿಷ್ಟು ಪೂರ್ವ ತಯಾರಿ ಇದ್ದರೆ ತಜ್ಞ ಪಶುವೈದ್ಯರು ರಕ್ತ ವರ್ಗಾವಣೆ ಮಾಡಬಲ್ಲರು” ಎಂದೆ.
ಅವರಿಗೆ ಸ್ವಲ್ಪ ಧೈರ್ಯ ಬಂತು ಅಂತ ಕಾಣಿಸುತ್ತೆ. ಅವರಲ್ಲಿ ಒಬ್ಬ “ ಇದನ್ನ ಬರ್ದಂಗೆ ತಡಿಯೋಕೆ ಇಂಜೆಕ್ಷನ್ ಕಂಡುಹಿಡ್ದಿಲ್ವೇ?” ಅಂದ. ನಾನು “ ಈ ಕಾಯಿಲೆ ಬರದಂತೆ ಲಸಿಕೆ ಇದೆ. ಇದನ್ನು ನಿಗದಿತವಾಗಿ ಹಾಕಿಸಬಹುದು. ಆದರೆ ಅತ್ಯಂತ ಮುಖ್ಯವಾದದ್ದು ಉಣ್ಣೆಗಳ ನಿಯಂತ್ರಣ. ಅನೇಕ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ಇವು ವಿಷಕಾರಿಯಾಗಿರುವುದರಿಂದ ಎಚ್ಚರದಿಂದ ಬಳಸಬೇಕು. ಈ ಹಾಳಾದ ಉಣ್ಣೆಗಳದೇ ಇದೆಲ್ಲಾ ಕಿತಾಪತಿ.ರಕ್ತಾನೂ ಕುಡಿತಾವೆ, ರೋಗಾನೂ ತರ್ತಾವೆ” ಅಂದೆ.
ಇದ್ದಕ್ಕಿದ್ದ ಹಾಗೇ ನಮ್ಮ ಸಂಭಾಷಣೆ, ಉಣ್ಣೆಗಳ ಕಡೆ ಹೊರಳಿದ್ದನ್ನು ಗಮನಿಸಿದ ನಮ್ಮ ಜವಾನ “ ಸಾರ್. ಈ ಉಗಣ ಬಾಳ ಡೇಂಜರ್ರು. ಮೊನ್ನೆ ಬೆಳ್ಳಣ್ಣೆಯ ಜಯರಾಮರ ದನ ಹಿಡಿದಾಗ ಉಣ್ಣೆ ಮರಿ ನನ್ ಕಿವಿ ಒಳಗೆ ಹೋಗಿ ತಾಪತ್ರಯ ಕೊಟ್ವು. ಹಾಳಾದವ್ವು” ಎಂದು ಅವನಿಗೆ ಉಣ್ಣೆ ಕಿವಿಯ ಒಳಗೆ ಕಚ್ಚಿಕೊಂಡು ತ್ರಾಸು ಕೊಟ್ಟಿದ್ದು, ಅದು ನಂಜಾಗಿ ಡಾಕ್ಟರು ಅದನ್ನು ಚಿಮಟ ಹಿಡಿದು ತೆಗೆಯುವಾಗ ಅದು ತುಂಡಾಗಿ ಕಿವಿ ಒಳಗೇ ಉಳಿದು ಕಿವಿ ಬಾತು ಒಂದು ಕಿವಿ ಕೆಪ್ಪ ಆಗಿ ಆತ ತಾತ್ಕಾಲಿಕವಾಗಿ ಕಿವುಡನಾಗಿದ್ದು ಮತ್ತು ಅದಕ್ಕೇನೆ ರಜೆ ಹಾಕಿದ್ದರ ಬಗ್ಗೆ ವಿಸ್ತಾರವಾಗಿ ಹೇಳಿದ.
ಅಷ್ಟು ಹೊತ್ತಿಗೆ ಸೈದೂರಿನಿಂದ ಬಂದ ರೈತನೊಬ್ಬ “ ಈ ಉಗಣಕ್ಕೆಲ್ಲಾ ಔಷಧಿ ಮಾಡ್ತಾರೇನ್ರಿ. ಭಟ್ರ ಹತ್ರ ಹೋದ್ರಾತಪ. ಮಂತ್ರದ್ ನೀರ್ ಕೊಡ್ತಾರೆ. ತಂದ್ ಹಾಕಿದ್ರ್ ಸೈ” ಎಂದ. ಇದರಿಂದ ಉತ್ತೇಜಿತನಾದ ಮತ್ತೊಬ್ಬ “ ಇದೊಂತು ಕಾಟಾನೆ ಸೈರೀ. ಭೂತಕ್ಕೆ ಶಾಂತಿ ಮಾಡ್ಸಿ ಕೋಳಿ ಕೊಟ್ರೆ ಎಲ್ಲಾ ಉಣ್ಗೂ ಮಾಯ” ಎಂದ.
ನನಗೆ ಇವರೆಲ್ಲರ ತರಹೆವಾರಿ ಸಲಹೆಗಳಿಂದ ಬೇಸರ ಬಂದು “ ಅಲ್ರೀ ಈ ಉಣ್ಣೆ ಹೇಗೆ ಜಾನುವಾರುಗಳಿಗೆ ಬರ್ತಾವೆ ಅಂತ ತಿಳ್ಕಳಿ. ನಂತ್ರ ಇದೆಲ್ಲಾ ನಿಜವೋ ಬುರುಡೆಯೋ ತಿಳಿಯುತ್ತೆ ಎಂದು ಉಣ್ಣೆಯ ಜೀವನ ವೃತ್ತಾಂತ ವಿವರಿಸಿದೆ.
ಥೈಲೆರಿಯಾ ಕಾಯಿಲೆ ಬಂದ ದನದಿಂದ ರಕ್ತ ಕುಡಿದ ಹೆಣ್ಣು ಉಣ್ಣೆಗಳು ನೆಲಕ್ಕೆ ಬೀಳುತ್ತವೆ. ಇವು ಹಾಕಿದ ೩-೪ ಸಾವಿರ ತತ್ತಿಗಳಲ್ಲಿ ಬದುಕಿದ ಸಾವಿರಾರು ಮೊಟ್ಟೆಗಳು “ಲಾರ್ವ” ಹಂತವನ್ನು ದಾಟಿ “ನಿಂಫ್” ಆಗಿ ಪರಿವರ್ತನೆಗೊಂಡು, ಅವುಗಳ ಪ್ರಿಯ ಅಹಾರವಾದ ರಕ್ತವನ್ನು ಹುಡುಕುತ್ತಾ ಇರುತ್ತವೆ. ಜಾನುವಾರುಗಳು ಕಂಡ ಕೂಡಲೇ, ಅವುಗಳ ಮೈಯೇರುವ ಅವು, ರಕ್ತ ಕುಡಿಯುವ ಸಂದರ್ಭದಲ್ಲಿ ಅವುಗಳ ಬಾಯಲ್ಲಿ ಇರುವ ಥೈಲೆರಿಯಾ ಸೂಕ್ಷ್ಮಾಣುಗಳನ್ನು ಸಹ ಚುಚ್ಚಿ ಬಿಡುತ್ತವೆ.
ನಾನು ಹೇಳುವುದನ್ನೇ ಇದನ್ನು ಗಮನಿಸುತ್ತಿದ್ದ ಒಬ್ಬ “ಹೌದಲ್ಲ. ಮೆದುಳಿಲ್ಲ ಎಂತದ್ದಿಲ್ಲ. ಎಷ್ಟು ಬುದ್ಧಿವಂತ ಇದ್ದಾವೆ ಇವು” ಎಂದು ಆಶ್ಚರ್ಯ ವ್ಯಕ್ತಪಡಿಸಿದ. ನಾನು ಮುಂದುವರೆಸಿದೆ.
“ಉಣ್ಣೆಗಳಿಗೆ ಬೆಳವಣಿಗೆಯ ಯಾವುದೇ ಹಂತಕ್ಕೆ ಹೋಗಲು ರಕ್ತ ಬೇಕಾಗಿರುವುದರಿಂದ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳನ್ನು ಅವುಗಳ ಮೈಗೆ ಕಡಿಯುವುದರಿಂದ ಉಣ್ಣೆಗಳು ಅಂಟಿಕೊಳ್ಳುತ್ತವೆ. ನಂತರ ಸುಮಾರು 15-60 ದಿನಗಳ ವರೆಗೂ ಸಹ ಉಣ್ಣೆ ಅವುಗಳ ಶರೀರದ ಮೇಲೆ ಇರುತ್ತಾ, ರಕ್ತವನ್ನು ಆಸ್ವಾಧಿಸುತ್ತಾ ಇರುತ್ತದೆ. ಅವು 1 ಮಿಲಿ ಮೀಟರ್ಗಿಂತಲೂ ಚಿಕ್ಕದಾಗಿರುವುದರಿಂದ, ಕಣ್ಣಿಗೇ ಕಾಣಿಸುವುದಿಲ್ಲ ಮತ್ತು ಕಚ್ಚಿದ್ದೂ ಗೊತ್ತಾಗುವುದಿಲ್ಲ” ಎನ್ನುತ್ತಾ ಬಾಗಿ ಖುರ್ಚಿಗೆ ಒರಗಿಕೊಂಡೆ.

“ಹೌದಲ್ಲ. ಇಷ್ಟೆಲ್ಲಾ ನಮ್ಗೆ ಗೊತ್ತೇ ಇಲ್ಲವಾಗಿತ್ತು. ಮತ್ತೆ ದನಕ್ಕೆ ಅಷ್ಟೆಲ್ಲಾ ಔಷಧಿ ಸಿಂಪಡಿಸಿದರೂ ಸಹ ಉಣ್ಣೆ ಹೋಗುವುದೇ ಇಲ್ಲ. ಇದಕ್ಕೆ ದಾರಿಯಿದೆಯೇ?” ಈ ಪ್ರಶ್ನೆ ತೂರಿ ಬಂತು. ನಾನು ಸಾವಧಾನವಾಗಿ ಒಂದೊಂದೇ ಅಂಶಗಳನ್ನು ವಿವರಿಸುತ್ತಾ ಹೋದೆ.
• ಉಣ್ಣೆಗಳ ಮತ್ತು ಅವುಗಳ ಲಾರ್ವಾಗಳ ಅಡಗು ತಾಣಗಳಾದ ಗೋಡೆಯ ಬಿರುಕುಗಳನ್ನು ಗುರುತಿಸಿ ಅಲ್ಲಿಗೆ ಉಣ್ಣೆನಾಶಕಗಳನ್ನು ಸಿಂಪಡಿಸಬೇಕು ಅಥವಾ ಸಣ್ಣ ಬೆಂಕಿಯಿಂದ ಸುಡಬೇಕು. ಇದರಿಂದ ಲಕ್ಷಾಂತರ ಕಣ್ಣಿಗೆ ಕಾಣದ ಉಣ್ಣೆಗಳು ಸತ್ತು ಹೋಗುತ್ತವೆ. ಉಣ್ಣೆಯ ಲಾರ್ವ ಮತ್ತು ನಿಂಫ್ ಹಂತಗಳು ಕೊಟ್ಟಿಗೆಯ ಬಿರುಕು ಮತ್ತು ಹುಲ್ಲಿನ ಎಲೆಗಳ ಮೇಲೆ ಇರುವುದರಿಂದ ಅವುಗಳ ಮೇಲೆ ಹೆಚ್ಚಿನ ಸಾಂದ್ರತೆಯ ಉಣ್ಣೆನಾಶಕಗಳ್ನು ಸೂಕ್ತ ಎಚ್ಚರಿಕೆ ವಹಿಸಿ ಸಿಂಪಡಿಸಬೇಕು. ಜಾನುವಾರುಗಳಿಗೆ ಅಂಟಿಕೊಂಡಿರುವ ಉಣ್ಣೆಗಳನ್ನು ಸೂಕ್ತ ಉಣ್ಣೆನಾಶಕಗಳನ್ನು ಸೂಕ್ತ ಪ್ರಮಾಣದಲ್ಲಿ ಪಶುವೈದ್ಯರ ಸಲಹೆಯಂತೆ ಸಿಂಪಡಿಸಿ ನಾಶ ಮಾಡಬೇಕು. ಜಾಸ್ತಿಯಾದರೆ ವಿಷವಾಗುವ ಸಾಧ್ಯತೆ ಇದೆ. ಇದನ್ನು 10 ದಿನಗಳಿಗೊಮ್ಮೆ ಪುನರಾವರ್ತಿಸಬೇಕು.
• ಉಣ್ಣೆಗಳನ್ನು ನಾಶಮಾಡಲು, ಅವುಗಳ ಮೈಮೇಲೆ ರಭಸವಾಗಿ ನೀರನ್ನು ಹಾರಿಸಿ, ರಭಸ ಜಲ ಚಿಕಿತ್ಸೆಯನ್ನೂ ಸಹ ಮಾಡಬಹುದು.ಇದರಿಂದ ವಿಷಕಾರಿ ರಾಸಾಯನಿಕಗಳ ಅವಶ್ಯಕತೆ ಇಲ್ಲ. ಜಾನುವಾರಿಗೂ ಆರಾಮವಾಗುತ್ತದೆ.
• ಉಣ್ಣೆಗಳ ನಾಶಕವಾಗಿ ಚುಚ್ಚುಮದ್ದೂ ಸಹ ಇದೆ. ತಜ್ಞ ಪಶುವೈದ್ಯರ ಮಾರ್ಗದರ್ಶನದಲ್ಲಿ ಉಪಯೋಗಿಸಬಹುದು.
• ಉಣ್ಣೆ ನಾಶಕ ಕಾಲರ್,ಸೋಪು,, ಶಾಂಪೂ, ಪೌಡರ್, ಚುಚ್ಚುಮದ್ದು, ಗುಳಿಗೆ, ಬೆನ್ನಹುರಿಯ ಮೇಲೆ ಬಿಡುವ ಔಷಧಿಗಳು ಇತ್ಯಾದಿಗಳು ಲಭ್ಯವಿದ್ದು ಇವುಗಳನ್ನು ತಜ್ಞ ಪಶುವೈದ್ಯರ ಸಲಹೆಯ ಮಾರ್ಗದರ್ಶನದಂತೆ ಉಪಯೋಗಿಸಬೇಕು.
• ನಿಯಮಿತವಾಗಿ ಜಾನುವಾರುಗಳ ಬೇವಿನ ಎಣ್ಣೆ, ಅಲೋವೆರಾ ಮತ್ತು ಅರಿಷಿಣದ ಮಿಶ್ರಣ ಲೇಪಿಸಬಹುದು.
“ಆದರೆ ಇತ್ತೀಚೆಗೆ ಉಣ್ಣೆಗಳು ಬಹುತೇಕ ಉಣ್ಣೆನಾಶಕಗಳಿಗೆ ಪ್ರತಿರೋಧ ಶಕ್ತಿಯನ್ನು ಹೊಂದಿರುವುದರಿಂದ ಅವುಗಳ ಉಪಟಳದಿಂದ ನಮ್ಮ ಜಾನುವಾರುಗಳನ್ನು ರಕ್ಷಿಸಲು ನಮಗೆ ಶ್ರದ್ಧೆ ಬೇಕು” ಎಂದೆ.
ಅಷ್ಟೊತ್ತಿಗಾಗಲೇ ಕತ್ತಲೆಯಾಗುತ್ತಾ ಬಂದಿತ್ತು. ಬಂದ ಜನಕ್ಕೆ ಮನೆಯ ನೆನಪು ಬಂತು ಅನಿಸುತ್ತೆ. ನಾವಿನ್ನು ಹೋಗಿ ಬರುತ್ತೇವೆ ಸಾರ್” ಎಂದರು. ನಾನು “ಹೋಗಿ ಬನ್ನಿ ಒಳ್ಲೆಯದಾಗಲಿ. ಕೊನೆಯ ಮಾತು “ ಮಾಂತ್ರಿಕರಾರಿಗೂ ಉಣ್ಣೆ ನಾಶ ಮಾಡುವ ಮಂತ್ರ ಗೊತ್ತಿರುವುದಿಲ್ಲ. ಮಂತ್ರದ ನೀರು ಮಾಡಿಕೊಡುವುದು,ಮಾಟ ತೆಗೆಯುವುದು ಅವರವರ ಜೀವನದ ಹಾದಿ. ಕಾಟ, ಭೂತ, ಭಟ್ರು, ಬೂಧಿ, ಮಂತ್ರ, ತಂತ್ರ ಇತ್ಯಾದಿ ಮೂಢನಂಬಿಕೆ ಬದಿಗೊತ್ತಿ ವೈಜ್ಞಾನಿಕವಾಗಿ ವಿಷಯ ತಿಳಿದು ಸೂಕ್ತ ಉಣ್ಣೆ ನಿವಾರಣಾ ಕ್ರಮ ಅನುಸರಿಸಿ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಿ” ಎನ್ನುತ್ತಾ ಅವರನ್ನು ಬೀಳ್ಕೊಟ್ಟೆ.

Post a Comment

0 Comments