ಶ್ರೀಲಂಕಾ ಅಧ್ಯಕ್ಷ, ಪ್ರಧಾನಿ ನಿವಾಸದಿಂದ 1000 ಕಲಾಕೃತಿ ನಾಪತ್ತೆ!
ಕೊಲಂಬೊ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸರ್ಕಾರ ವಿರೋಧಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದ್ದ ಅಧ್ಯಕ್ಷರು ಮತ್ತು ಪ್ರಧಾನಿ ನಿವಾಸದಿಂದ ಅತ್ಯಂತ ಪ್ರಾಚೀನ ಹಾಗೂ ಅಪೂರ್ವ ಕಲಾಕೃತಿಗಳು ಸೇರಿದಂತೆ 1000ಕ್ಕೂ ಹೆಚ್ಚು ಕಲಾಕೃತಿಗಳು ನಾಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಆರಂಭಿಕ ತನಿಖೆಯಿಂದ ಈ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಆದರೆ ಅಧ್ಯಕ್ಷರ ನಿವಾಸವನ್ನು ಪ್ರಾಚ್ಯವಸ್ತು ಮಹತ್ವದ ತಾಣ ಎಂದು ಗಜೆಟ್ ಅಧಿಸೂಚನೆ ಹೊರಡಿಸಿದ್ದರೂ, ಇಲ್ಲಿದ್ದ ಕಲಾಕೃತಿಗಳ ಬಗ್ಗೆ ನಿಖರವಾದ ಮಾಹಿತಿ ಪ್ರಾಚ್ಯವಸ್ತು ಇಲಾಖೆ ಬಳಿ ಇಲ್ಲದ ಹಿನ್ನೆಲೆಯಲ್ಲಿ ನಿಖರವಾಗಿ ಎಷ್ಟು ಕಲಾಕೃತಿಗಳು ನಾಪತ್ತೆಯಾಗಿವೆ ಎಂದು ಹೇಳುವುದು ಕಷ್ಟಸಾಧ್ಯ ಎಂದು ಪೊಲೀಸರು ವಿವರಿಸಿದ್ದಾರೆ ಎಂದು ಕೊಲಂಬೊ ಪೇಜ್ ವೆಬ್‍ಪೋರ್ಟೆಲ್ ವರದಿ ಮಾಡಿದೆ.
ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಜುಲೈ 9ರಂದು ಸರ್ಕಾರ ವಿರೋಧಿ ಪ್ರತಿಭಟನಾಕಾರರು ರಾಜಧಾನಿ ಕೊಲಂಬೊದಲ್ಲಿರುವ ಅಧ್ಯಕ್ಷರ ಅರಮನೆ ಮತ್ತು ಪ್ರಧಾನಿ ನಿವಾಸಕ್ಕೆ ನುಗ್ಗಿ ವಶಪಡಿಸಿಕೊಂಡಿದ್ದರು. ಆ ಬಳಿಕ ಜುಲೈ 13ರಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ಪಲಾಯನ ಮಾಡಿದ್ದರು.
0 Comments