WI vs IND : ಅಕ್ಸರ್ ಪಟೇಲ್ ಅಮೋಘ ಆಟ, ವಿಂಡೀಸ್ ವಿರುದ್ಧ 2ನೇ ಪಂದ್ಯ ಗೆದ್ದ ಭಾರತ, ಸರಣಿ ಕೈವಶ
ಟ್ರಿನಿಡ್ಯಾಡ್(ಜು.25): ವೆಸ್ಟ್‌ಇಂಡೀಸ್ ತಂಡ ನೀಡಿದ ಬೃಹತ್ ಗುರಿಯನ್ನ ಬೆನ್ನತ್ತಿ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ತಂಡ ಸರಣಿಯನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆಯನ್ನ ಸಾಧಿಸಿದೆ.
ಆತಿಥೇಯರ ವಿರುದ್ಧ ಮೊದಲನೇ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಕೆರಿಬಿಯನ್ನರು 311 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ್ದರು. ಆದರೆ, ಮೊದಲನೇ ಪಂದ್ಯದಲ್ಲಿ 97 ರನ್ ಗಳಿಸಿದ್ದ ನಾಯಕ ಶಿಖರ್ ಧವನ್ ಇಂದಿನ ಪಂದ್ಯದಲ್ಲಿ ಕೇವಲ 13 ರನ್ ಗಳಿಸಿ ಔಟಾಗಿದ್ದರು. ನಂತರ ಬಂದ ಶ್ರೇಯಸ್ ಅಯ್ಯರ್(63), ಶುಭಮನ್ ಗಿಲ್(43) ಸಂಜು ಸ್ಯಾಮನ್ಸನ್(54), ದೀಪಕ್ ಹೂಡಾ(33) ಹಾಗೂ ಅಕ್ಸರ್ ಪಟೇಲ್(64) ಅವರ ಜವಾಬ್ದಾರಿ ಆಟದಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ವಿಂಡೀಸ್ ತಂಡದ ಪರ ಶಾಯ್ ಹೋಪ್ ಆಕರ್ಷಕ 115 ರನ್ ಗಳಿಸಿ ಶತಕದ ಸಂಭ್ರಮಪಟ್ಟಿದ್ದರು. ನಂತರ ಬಂದ ಶಮರ್ ಬ್ರೂಕ್ಸ್(35), ಕೆ ಮೇಯರ್ಸ್(39) ಹಾಗೂ ಪೂರನ್ 75 ರನ್ ಸೇರಿದಂತೆ ಉಳಿದ ಆಟಗಾರರು ತಂಡಕ್ಕೆ ನೀಡಿದ ರನ್ ಕೊಡುಗೆಯಿಂದ ವಿಂಡೀಸ್ ತಂಡ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು 311 ರನ್‌ಗಳ ಗುರಿಯನ್ನ ಭಾರತಕ್ಕೆ ನೀಡಿತ್ತು.
ಭಾರತದ ಪರ ಶಾರ್ದೂಲ್ ಠಾಕೂರ್ 3, ದೀಪಕ್ ಹೂಡಾ, ಅಕ್ಸರ್ ಪಟೇಲ್ ಹಾಗೂ ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಕಬಳಿಸಿದ್ದರು. ಇನ್ನು ವಿಂಡೀಸ್ ತಂಡದ ಪರ ಅಲ್ಜಾರಿ ಜೋಸೆಫ್(2), ಕೈಲ್ ಮೇಯರ್ಸ್(2) ರೊಮಾರಿಯೋ ಶೆಫರ್ಡ್ ಹಾಗೂ ಕೈಲ್ ಮೇಯರ್ಸ್ ತಲಾ 1 ವಿಕೆಟ್ ಪಡೆದು ಸಂಭ್ರಮಿಸಿದರು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಜು.27 ರಂದು ಟ್ರಿನಿಡ್ಯಾಡ್‌ನಲ್ಲಿ ನಡೆಯಲಿದೆ.
0 Comments