IPL 2023: ಐಪಿಎಲ್‌ಗೆ ಐಸಿಸಿ ಗ್ರೀನ್ ಸಿಗ್ನಲ್: ಪಾಕ್ ತಕರಾರು..!
IPL 2023: ದೇಶೀಯ ಕ್ರಿಕೆಟ್ ಲೀಗ್‌ಗಳು ಪ್ರಪಂಚದಾದ್ಯಂತ ಪ್ರಾರಂಭವಾಗುತ್ತಿವೆ. ಅದು ಅಂತರರಾಷ್ಟ್ರೀಯ ಕ್ಯಾಲೆಂಡರ್ ಮೇಲೆ ಪರಿಣಾಮ ಬೀರಲಿದೆ. ಇನ್ನೂ ಹಲವು ಲೀಗ್‌ಗಳು ಪ್ರಾರಂಭವಾಗಲಿವೆ.
BCCI vs PCB |
ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ವಿಶೇಷ ವಿಂಡೋ ರೂಪಿಸುವಂತೆ ಬಿಸಿಸಿಐ ಮಾಡಿದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂಗೀಕರಿಸಿದೆ. ಅದರಂತೆ ಮುಂದಿನ ವರ್ಷದಿಂದ ಎರಡೂವರೆ ತಿಂಗಳುಗಳ ಕಾಲ ಐಪಿಎಲ್ ನಡೆಯಲಿದೆ. ಇದಕ್ಕಾಗಿ ಐಸಿಸಿ ತನ್ನ ಫ್ಯೂಚರ್ ಟೂರ್ ಪ್ರೋಗ್ರಾಂನಲ್ಲಿ (ಎಫ್‌ಟಿಪಿ) ಐಪಿಎಲ್‌ಗೆ ಎರಡೂವರೆ ತಿಂಗಳ ಅವಧಿಯನ್ನು ನಿಗದಿಪಡಿಸಿದೆ. ಆದರೆ ಇದೇ ವಿಚಾರವಾಗಿ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ತಕರಾರು ತೆಗೆದಿದೆ. ಐಪಿಎಲ್‌ಗೆ ಹೆಚ್ಚುವರಿ ಸಮಯ ನಿಗದಿಪಡಿಸಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಇದನ್ನು ಪುನರ್ಪರಿಶೀಲಿಸಲು ಐಸಿಸಿಗೆ ಪಾಕ್ ಕ್ರಿಕೆಟ್ ಮಂಡಳಿ ದೂರು ನೀಡಿದೆ.
ಪಿಸಿಬಿ ಪ್ರಕಾರ, ಟಿ20 ಲೀಗ್‌ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮತ್ತು ಭವಿಷ್ಯದ ಪ್ರವಾಸ ಕಾರ್ಯಕ್ರಮಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೇಲೆ ಟಿ20 ಲೀಗ್‌ಗಳ ಹೆಚ್ಚುತ್ತಿರುವ ಪ್ರಭಾವವನ್ನು ಮೌಲ್ಯಮಾಪನ ಮಾಡಬೇಕು. ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ, ಮೂರು ತಿಂಗಳಲ್ಲಿ ವರದಿ ಸಿದ್ಧಪಡಿಸಿ ಮಂಡಿಸಬೇಕು ಎಂದು ಪಿಸಿಬಿ ಐಸಿಸಿಯನ್ನು ಕೋರಿದೆ.
ಐಸಿಸಿಯ ವಾರ್ಷಿಕ ಸಭೆಯು ಬರ್ಮಿಂಗ್ಹ್ಯಾಮ್‌ನಲ್ಲಿ ಜುಲೈ 25 ಮತ್ತು 26 ರಂದು ನಡೆಯಲಿದ್ದು, ಈ ವೇಳೆ ಈ ಬಗ್ಗೆ ಚರ್ಚಿಸುವುದಾಗಿ ಕೂಡ ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಸದ್ಯ ಔಪಚಾರಿಕವಾಗಿ ಸಿದ್ಧಪಡಿಸಲಾಗಿರುವ FTP ಕರಡಿನಂತೆ 2022 ರಿಂದ ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಿಂದ ಜೂನ್ ಮೊದಲ ವಾರದವರೆಗೆ ಐಪಿಎಲ್‌ಗೆ ಎರಡೂವರೆ ತಿಂಗಳ ಅವಧಿಯನ್ನು ನೀಡಲಾಗಿದೆ. ಅಂದರೆ ಈ ಅವಧಿಯಲ್ಲಿ ಯಾವುದೇ ಪ್ರಮುಖ ಅಂತಾರಾಷ್ಟ್ರೀಯ ಸರಣಿಗಳು ನಡೆಯುವುದಿಲ್ಲ. ಇದರಿಂದ ವಿದೇಶಿ ಆಟಗಾರರು ಕೂಡ ಐಪಿಎಲ್ನಲ್ಲಿ ಪಾಲ್ಗೊಳ್ಳಬಹುದು.
ಆದರೆ ಐಸಿಸಿ ನಡೆಯನ್ನು ಪ್ರಶ್ನಿಸಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸಿಇಒ ಫೈಸಲ್ ಹಸ್ನೇನ್, “ದೇಶೀಯ ಕ್ರಿಕೆಟ್ ಲೀಗ್‌ಗಳು ಪ್ರಪಂಚದಾದ್ಯಂತ ಪ್ರಾರಂಭವಾಗುತ್ತಿವೆ. ಅದು ಅಂತರರಾಷ್ಟ್ರೀಯ ಕ್ಯಾಲೆಂಡರ್ ಮೇಲೆ ಪರಿಣಾಮ ಬೀರಲಿದೆ. ಇನ್ನೂ ಹಲವು ಲೀಗ್‌ಗಳು ಪ್ರಾರಂಭವಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಚರ್ಚಿಸುವ ಮೂಲಕ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ಐಸಿಸಿಗೆ ಈಗಾಗಲೇ ಪತ್ರ ಬರೆದಿದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ಇದೇ ತಿಂಗಳು ನಡೆಯಲಿರುವ ವಾರ್ಷಿಕ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ. ನಮ್ಮಂತೆ ಇತರೆ ಎರಡು ಕ್ರಿಕೆಟ್ ಮಂಡಳಿಗಳು ಕೂಡ ಐಸಿಸಿಯ ನಡೆಯ ಅಸಮ್ಮತಿ ಹೊಂದಿದೆ ಎಂದು ಪಾಕ್ ಕ್ರಿಕೆಟ್ ಮಂಡಳಿಯ ಸಿಇಒ ಫೈಸಲ್ ಹಸ್ನೇನ್ ತಿಳಿಸಿದ್ದಾರೆ.
ಅತ್ತ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ 2016 ರಿಂದ ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ಆಯೋಜಿಸುತ್ತಿದೆ. ಆದರೆ ಐಸಿಸಿ ಎಫ್‌ಟಿಪಿಯಲ್ಲಿ ಯಾವುದೇ ಪ್ರತ್ಯೇಕ ಅವಧಿಯನ್ನು ನೀಡಿಲ್ಲ. ಇತ್ತ ಐಪಿಎಲ್ಗಾಗಿ ವಿಶೇಷ ಸಮಯವಕಾಶ ನೀಡಿರುವುದು ಪಾಕ್ ಕ್ರಿಕೆಟ್ ಮಂಡಳಿಯನ್ನು ಚಿಂತೆಗೆ ಕಾರಣವಾಗಿದೆ. ಏಕೆಂದರೆ ಪಾಕ್ ಕ್ರಿಕೆಟಿಗರಿಗೆ ಐಪಿಎಲ್ನಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಹೀಗಾಗಿ ಐಸಿಸಿ ವಿಶೇಷ ಅವಧಿಯನ್ನು ರೂಪಿಸಿರುವುದನ್ನು ಪ್ರಶ್ನಿಸಲು ಮುಂದಾಗಿದೆ.
ಇದಾಗ್ಯೂ ಐಸಿಸಿ ಎಫ್‌ಟಿಪಿಯಲ್ಲಿ ಪಾಕ್ಗೆ ಗುಡ್ ನ್ಯೂಸ್ ಇದೆ. 26 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯವಹಿಸಲು ಪಾಕ್ ಕ್ರಿಕೆಟ್ ಮಂಡಳಿಗೆ ಅವಕಾಶ ನೀಡಲಾಗಿದೆ. ಅದರಂತೆ 2025 ರ ಫೆಬ್ರವರಿ-ಮಾರ್ಚ್‌ನಲ್ಲಿ ಪಾಕಿಸ್ತಾನಿ ನೆಲದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುವ ಸಾಧ್ಯತೆಯಿದೆ. ಇದಕ್ಕೂ ಮುನ್ನ 1996ರಲ್ಲಿ ವಿಶ್ವಕಪ್ (ಜಂಟಿಯಾಗಿ) ಪಾಕಿಸ್ತಾನದಲ್ಲಿ ನಡೆದಿತ್ತು. ಇದಾದ ಬಳಿಕ ಯಾವುದೇ ಐಸಿಸಿಯ ಪ್ರಮುಖ ಟೂರ್ನಿಯನ್ನು ಆಯೋಜಿಸಲು ಅವಕಾಶ ಸಿಕ್ಕಿರಲಿಲ್ಲ.
0 Comments