ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022: ಇಂದು ಅರಮನೆಗೆ ಗಜಪಡೆ ಆಗಮನ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಇಂದು ಅರಮನೆಗೆ ದಸರಾ ಗಜಪಡೆ ಆಗಮಿಸಲಿದ್ದು, ಸಚಿವ ಎಸ್ಟಿ ಸೋಮಶೇಖರ್ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಸ್ವಾಗತಿಸಲಿದ್ದಾರೆ.
ಮೈಸೂರು ದಸರಾ ಗಜಪಯಣ ಆರಂಭ
ಮೈಸೂರು ದಸರಾ ಮಹೋತ್ಸವದ ಮೊದಲ ಕಾರ್ಯಕ್ರಮ ಗಜಪಯಣ ಆಗಸ್ಟ್ 7ರಂದು ಆರಂಭಿಸಲಾಗಿತ್ತು. ಕಾಡಿನಿಂದ ನಾಡಿಗೆ ದಸರಾ ಗಜಪಡೆ ಬರಲಿದ್ದು, ಗಜಪಯಣಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದ್ದರು. ವೀರನಹೊಸಹಳ್ಳಿ ಅರಣ್ಯ ಪ್ರದೇಶದ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ಗಜಪಯಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಜಪಡೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ನಂತರ ಲಾರಿಗಳ ಮೂಲಕ ಅಭಿಮನ್ಯು ನೇತೃತ್ವದ ಆನೆಗಳ ತಂಡ ಮೈಸೂರಿಗೆ ಆನೆಗಳು ಆಗಮಿಸಲಿವೆ. ಈ ಭಾರಿ 14 ಆನೆಗಳು ಮೈಸೂರು ದಸರೆಯಲ್ಲಿ ಭಾಗವಹಿಸಲಿವೆ. ಈ ಭಾರಿ ಅದ್ದೂರಿ ಹಾಗೂ ಸಾಂಪ್ರದಾಯಿಕ ದಸರೆಗೆ ಸರ್ಕಾರ ಸಿದ್ದತೆ ನಡೆಸಿದೆ.
ಜಂಬೂಸವಾರಿಗೆ ಸಿದ್ದವಾದ ಗಜಪಡೆ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಆನೆಗಳ ಪಟ್ಟಿ ಕೂಡ ಅಂತಿಮಗೊಂಡಿದೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರಿಗೆ ಕಾಲಿಡಲಿದ್ದು, 4 ಹೆಣ್ಣಾನೆಗಳು ಸೇರಿದಂತೆ 14 ಅನೆಗಳ ಪಟ್ಟಿ ಅಂತಿಮಗೊಂಡಿದೆ. ಮತ್ತಿಗೋಡು ಆನೆ ಶಿಬಿರದಿಂದ 39 ವರ್ಷದ ಗೋಪಾಲಸ್ವಾಮಿ, 57 ವರ್ಷದ ಅಭಿಮನ್ಯು, 22 ವರ್ಷ ಭೀಮ, 38 ವರ್ಷದ ಮಹೇಂದ್ರ, ಬಳ್ಳೆ ಆನೆ ಶಿಬಿರದಿಂದ 63 ವರ್ಷದ ಅರ್ಜುನ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿವೆ.
ದುಬಾರೆ ಆನೆ ಶಿಬಿರದಿಂದ 59 ವರ್ಷದ ವಿಕ್ರಮ, 44 ವರ್ಷದ ಧನಂಜಯ, 45 ವರ್ಷದ ಕಾವೇರಿ, 41 ವರ್ಷದ ಗೋಪಿ, 40 ವರ್ಷದ ಶ್ರೀರಾಮ, 63 ವರ್ಷದ ವಿಜಯಾ ಆನೆ, ರಾಮಾಪುರ ಆನೆ ಶಿಬಿರದಿಂದ 49 ವರ್ಷದ ಚೈತ್ರಾ, 21 ವರ್ಷದ ಲಕ್ಷ್ಮೀ, 18 ವರ್ಷದ ಪಾರ್ಥಸಾರಥಿ ಆನೆ ಆಗಮಿಸಲಿವೆ. ಆಗಸ್ಟ್ 7 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಅರಣ್ಯ ವ್ಯಾಪ್ತಿಯ ದೊಡ್ಡಹೆಜ್ಜೂರು ಗ್ರಾಮದಿಂದ ಗಜಪಯಣ ಆರಂಭವಾಗಲಿದೆ. ಮೊದಲ ತಂಡದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ.
0 Comments