ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸ್ ಆಗಿ ಒಟ್ಟಿಗೆ ಸರ್ಕಾರಿ ಕೆಲಸ ಗಿಟ್ಟಿಸಿದ ಅಮ್ಮ - ಮಗ
ಕೊಚ್ಚಿ: ಅಪರೂಪದ ಕ್ಷಣವೊಂದಕ್ಕೆ ದೇವರನಾಡು ಹಾಗೂ ದೇಶದ ನಂಬರ್ ಒನ್ ಸಾಕ್ಷರತಾ ರಾಜ್ಯ ಕೇರಳ ಸಾಕ್ಷಿಯಾಗಿದೆ. ಅಮ್ಮ-ಮಗ ಇಬ್ಬರು ಒಟ್ಟಿಗೆ ಕೇರಳದ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಿದ್ದಾರೆ.
42 ವರ್ಷದ ತಾಯಿ ಬಿಂದು ಮತ್ತು ಆಕೆಯ 24 ವರ್ಷದ ಮಗ ವಿವೇಕ್ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇವರು ಮಲಪ್ಪುರಮ್ನ ನಿವಾಸಿಗಳು. ತಮ್ಮ ಸಾಧನೆ ಬಗ್ಗೆ ಮಾತನಾಡಿರುವ ಬಿಂದು ಮಗ ವಿವೇಕ್, ನಾವಿಬ್ಬರು ಒಟ್ಟಿಗೆ ತರಬೇತಿ ತರಗತಿಗೆ ಹೋಗುತ್ತಿದ್ದೆವು. ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದರು. ನಮ್ಮ ಶಿಕ್ಷಕರಿಂದ ನಾವು ತುಂಬಾ ಸ್ಫೂರ್ತಿಯನ್ನು ಪಡೆದೆವು. ಒಟ್ಟಿಗೆ ಓದಿದೆವು ಹೊರತು, ನಾವಿಬ್ಬರು ಒಟ್ಟಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಅರ್ಹರಾಗುತ್ತೇವೆ ಎಂದು ಭಾವಿಸಿರಲಿಲ್ಲ. ಈಗ ನಾವಿಬ್ಬರು ತುಂಬಾ ಖುಷಿಯಾಗಿದ್ದೇವೆ ಎಂದು ವಿವೇಕ್ ಹೇಳಿದ್ದಾರೆ.
ಬಿಂದು ಅವರು ಕೊನೆಯ ದರ್ಜೆಯ ಸೇವಕರು (ಎಲ್ಜಿಎಸ್) ಪರೀಕ್ಷೆಯಲ್ಲಿ 92 ರ್ಯಾಂಕ್ ಪಡೆದರೆ, ಅವರ ಪುತ್ರ ವಿವೇಕ್ ಕೆಳ ವಿಭಾಗೀಯ ಗುಮಾಸ್ತ (ಎಲ್ಡಿಸಿ) ಪರೀಕ್ಷೆಯಲ್ಲಿ 38ನೇ ರ್ಯಾಂಕ್ ಪಡೆದಿದ್ದಾರೆ. ಸತತ ಮೂರು ಪ್ರಯತ್ನಗಳ ಸೋಲಿನ ಬಳಿಕ ನಾಲ್ಕನೇ ಪ್ರಯತ್ನದಲ್ಲಿ ಅಮ್ಮ-ಮಗ ಇಬ್ಬರು ಯಶಸ್ವಿಯಾಗಿದ್ದಾರೆ. ನನ್ನ ನಿಜವಾದ ಗುರಿ ICDS (ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವೀಸಸ್) ಮೇಲ್ವಿಚಾರಕರ ಪರೀಕ್ಷೆಯಾಗಿತ್ತು. ಆದರೆ, LGS ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು 'ಬೋನಸ್' ಎಂದು ಬಿಂದು ಹೇಳಿದ್ದಾರೆ.
Kerala | A 42-year-old mother and her 24 years old son from Malappuram have cleared Public Service Commission (PSC) examination together pic.twitter.com/BlBKYJiDHh
— ANI (@ANI) August 10, 2022
ಕಳೆದ 10 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿರುವ ಬಿಂದು ಅವರಿಗೆ ಕೋಚಿಂಗ್ ಸೆಂಟರ್‌ನಲ್ಲಿರುವ ಅವರ ಶಿಕ್ಷಕರು, ಅವರ ಸ್ನೇಹಿತರು ಮತ್ತು ಅವರ ಮಗ ಬೆಂಬಲವೇ ಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕಾರಣ ಎಂದು ಹೇಳಿದ್ದಾರೆ. ಮಗ ವಿವೇಕ್ 10 ನೇ ತರಗತಿಯಲ್ಲಿದ್ದಾಗ ಆತನ ಓದನ್ನು ಪ್ರೋತ್ಸಾಹಿಸಲು ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ಆದರೆ, ಅದೇ ಹವ್ಯಾಸ ಇಂದು ಇದು ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ (PSC) ಪರೀಕ್ಷೆಗಳಿಗೆ ತಯಾರಿ ನಡೆಸುವಂತೆ ಪ್ರೇರೇಪಿಸಿತು. ಅದರ ಫಲವನ್ನು ನಾನಿಂದು ಪಡೆದಿದ್ದೇನೆ ಎಂದು ಬಿಂದು ತಿಳಿಸಿದರು. (ಏಜೆನ್ಸೀಸ್)
0 Comments