Ticker

6/recent/ticker-posts

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಕಮಾಲ್-22 ಚಿನ್ನದ ಪದಕಗಳ ಬೇಟೆ.. ಭಾರತದ ಐತಿಹಾಸಿಕ ಸಾಧನೆ.

 ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತ ಕಮಾಲ್-22 ಚಿನ್ನದ ಪದಕಗಳ ಬೇಟೆ.. ಭಾರತದ ಐತಿಹಾಸಿಕ ಸಾಧನೆ.

ಬ್ರಿಟನ್​ನ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ 22ನೇ ಕಾಮನ್ವೆಲ್ತ್​ ಗೇಮ್ಸ್​​ಗೆ ವಿದ್ಯುಕ್ತ ತೆರೆಬಿದ್ದಿದೆ. ಕಳೆದ 11 ದಿನಗಳಿಂದ ನಡೆದ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಅಭೂತಪೂರ್ವ ಸಾಧನೆಯ ಮೂಲಕ, ಚಿನ್ನದ ಒಳಪಿನ ಭಾರತ ಹೊಳೆಯುವಂತೆ ಮಾಡಿದ್ದಾರೆ..


22 ಚಿನ್ನದ ಪದಕಗಳ ಭರ್ಜರಿ ಬೇಟೆ..

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆದ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಭರ್ಜರಿಯಾಗಿತ್ತು. ಬರೋಬ್ಬರಿ 22 ಚಿನ್ನದ ಪದಕಗಳೊಂದಿಗೆ ಒಟ್ಟು 60 ಪದಕಗಳನ್ನು ಗೆಲ್ಲುವ ಮೂಲಕ ಭರ್ಜರಿ ಸಾಂಡ್​ ಮಾಡಿದೆ.

ಕುಸ್ತಿ, ವೇಟ್​ ಲಿಫ್ಟಿಂಗ್​ನಲ್ಲಿ ಭಾರತಕ್ಕೆ ಹೆಚ್ಚು ಪದಕ

ಬರ್ಮಿಂಗ್​ಹ್ಮಾಮ್​ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಪೈಲ್ವಾನ್​ಗಳ ಆರ್ಭಟ ಜೋರಾಗಿತ್ತು. ಅವರು ಹಾಕುತ್ತಿದ್ದ ಪಟ್ಟುಗಳಿಗೆ ಎದುರಾಳಿ ಸ್ಪರ್ಧಿ, ಸೋಲು ಒಪ್ಪಿಕೊಳ್ಳದೇ ಬೇರೆ ದಾರಿಯೇ ಇರ್ತಿರಲಿಲ್ಲ. ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚಿನ ಪದಕ ಭಾರತದ ಪಾಲಾಗಿದೆ. ಇನ್ನೊಂದು ವಿಷೇಶ ಅಂದ್ರೆ ಭಾರತದ ಎಲ್ಲಾ ಕುಸ್ತಿ ಪಟುಗಳಿಗೂ ಪದಕ ಗರಿ ಸಿಕ್ಕಿದೆ. ಇನ್ನು ವೇಟ್​ ಲಿಫ್ಟರ್​​​​​​ಗಳು ಅತಿ ಹೆಚ್ಚು ಪದಕಗಳನ್ನು ತಂದು ಕೊಟ್ಟಿದ್ದಾರೆ. ಭಾರ ಎತ್ತುವ ಸ್ಪರ್ಧೆಯಲ್ಲಿ 1 ಚಿನ್ನ, 3 ಬೆಳ್ಳಿ, 4 ಕಂಚು ಬಂದಿವೆ. ಇದರಲ್ಲಿ ಕನ್ನಡಿಗ ಗುರುರಾಜ್​ ಪೂಜಾರಿಯೂ ಇದ್ದಾರೆ. ಈ ಬಾರಿ ಭಾರತದ ಎಲ್ಲಾ ಕುಸ್ತಿ ಪಟುಗಳಿಗೂ ಪದಕದ ಗೆಲುವಿನ ನಗೆ ಬೀರಿದ್ದಾರೆ.


ದೇಶಕ್ಕೆ ಚಿನ್ನಗೆದ್ದ ಕೊಟ್ಟವರ ಡಯಟ್​ ಪ್ಲ್ಯಾನೇ ಕೇಳಿದ್ರೆ ಅಚ್ಚರಿ ಪಡ್ತೀರ. ಪಕ್ಕಾ ದೇಸಿ ಶೈಲಿಯ ಡಯಟ್, ಊಟ, ಎನರ್ಜಿ ಡ್ರಿಂಕ್​ ಅನ್ನು ಇವರು ಸೇವಿಸುತ್ತಾರಂತೆ. ಪ್ರತಿದಿನ ಬಾದಾಮಿ, ಗೋಡಂಬಿ, ದ್ರಾಕ್ಷಿ, ಅಕ್ರೋಟ್, ಗಸಗಸೆ, ಗುಲಾಬಿ ಹೂವಿನ ದಳಗಳನ್ನ ಸೇರಿಸಿದ ಎನರ್ಜಿ ಡ್ರಿಂಕ್. ಡ್ರಿಂಕ್​ ಜೊತೆಗೆ ಕನಿಷ್ಠ 200-300 ಗ್ರಾಂ ದೇಸಿ ತುಪ್ಪ ಸೇವನೆ, ಒಂದು ದಿನಕ್ಕೆ ಎರಡು ಬಾರಿ ಹಣ್ಣುಗಳ ಸೇವನೆ ಕೂಡ ಕಡ್ಡಾಯ ಅಂತೆ. ಇನ್ನು ಪ್ರೋಟಿನ್​ಗಾಗಿ ಪನ್ನೀರ್​ ಕೂಡ ಸೇವಿಸುತ್ತಾರೆ. ಆದ್ರೆ ಕೃತಕ ಪ್ರೋಟಿನ್, ಮಾಂಸಾಹಾರ ಸೇವನೆ ಅತಿ ಕಡಿಮೆ.. ಜೊತೆಗೆ ಪ್ರತಿದಿನ ಕನಿಷ್ಠ 8ರಿಂದ 10 ಗಂಟೆ ನಿದ್ದೆ ಕೂಡ ಬೇಕಂತೆ.


ಬಂಗಾರದ ಬರ ನೀಗಿಸಿಕೊಂಡ ಪಿ.ವಿ. ಸಿಂಧು..

ಭಾರತದ ಚಿನ್ನದಂಥ ಹುಡುಗಿ ಪಿ.ವಿ ಸಿಂಧು ಚಿನ್ನದಂಥ ಸಾಧನೆ ಮಾಡಿದ್ದಾರೆ. ಇದುವರೆಗೂ ಮಹತ್ವದ ಟೂರ್ನಿಯಲ್ಲಿ ಪಿ.ಸಿ. ಸಿಂಧು ಗೋಲ್ಡ್​ಮೆಡಲ್​ ಗೆದಿರಲಿಲ್ಲ.. ಈ ಹಿಂದೆ ಒಲಿಂಪಿಕ್ಸ್​, ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕಂಚು, ಬೆಳ್ಳಿ ಪದಕಗಳನ್ನಷ್ಟೇ ಗೆದ್ದಿದ್ದರು.. ಚಿನ್ನವನ್ನು ಗೆಲ್ಲಲಾಗಲಿಲ್ಲ ಎಂಬ ಕೊರಗು ಇತ್ತು. ಆ ಕೊರಗನ್ನು ಕೊನೆಗೂ ತೀರಿಸಿಕೊಂಡಿದ್ದಾರೆ. ಮಹಿಳೆಯರ ಸಿಂಗಲ್ಸ್​ ಫೈನಲ್ಸ್​ನಲ್ಲಿ ಕೆನಾಡದ ಆಟಗಾರ್ತಿಯನ್ನು ನೇರ ಸೆಟ್​ಗಳಿಂದ ಸೋಲಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟರು.


 10 ಸಾವಿರ ಮೀಟರ್​ ನಡಿಗೆ ಪಂದ್ಯದಲ್ಲಿ ಪ್ರಿಯಾಂಕ ಗೋಸ್ವಾಮಿ ಬೆಳ್ಳಿ ಪದಕಕ್ಕೆ ಕೊರಳೊಡಿದ್ದಾರೆ. ವಿಶೇಷವೆಂದ್ರೆ ಪ್ರಿಯಾಂಕ ಗೋಸ್ವಾಮಿ ಅಪ್ಪಟ ಶ್ರೀಕೃಷ್ಣನ ಭಕ್ತೆ. ಎಷ್ಟರ ಮಟ್ಟಿಗೆ ಅಂದ್ರೆ ಇವರು ಶ್ರೀಕೃಷ್ಣನ ಮೂರ್ತಿಯನ್ನ ಜೊತೆಯಲ್ಲಿಟ್ಟುಕೊಂಡೆ ಬೆಳ್ಳಿ ಪದಕವನ್ನ ಸ್ವೀಕರಿಸಿದ್ದಾರೆ. ಅಲ್ಲದೆ ಈ ಬೆಳ್ಳಿ ಪದಕವನ್ನ ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ.


ಪೂಜ್​ ಗೆಹಲೋಟ್​ ಸಾಧನೆಗೆ ಪ್ರಧಾನಿ ಶ್ಲಾಘನೆ..

50 ಕೆಜಿಯ ಮಹಿಳೆಯರ ಫ್ರೀ ಸ್ಟೈಲ್​​ ಕುಸ್ತಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕಕ್ಕೆ ಕೊರಳೊಡಿದ್ದಾರೆ. ಆದ್ರೆ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದಿರೋದಕ್ಕೆ ಭಾರತೀಯರಲ್ಲಿ ಕ್ಷಮೆಯಾಚಿಸಿದ್ದಾರೆ. ಈ ವಿಡಿಯೋ ನೋಡಿದ ಪ್ರಧಾನಿ ಮೋದಿ, ಆಕೆಗೆ ಸಾಂತ್ವನ ಹೇಳಿದ್ದಾರೆ. ಪೂಜಾ, ನಿಮ್ಮ ಪದಕದ ಗೆಲುವಿಗೆ ಸಂಭ್ರಮಿಸಬೇಕೇ ಹೊರತು ಕ್ಷಮೆ ಕೇಳಬೇಕಿಲ್ಲ. ಹೀಗೆ ಮಿಂಚುತಲ್ಲೇ ಇರಿ..! ಎಂದು ಪ್ರಧಾನಿ ಮೋದಿ ಪೂಜಾ ಗೆಹ್ಲೋಟ್​ರನ್ನು ಹುರಿದುಂಬಿಸಿದ್ದಾರೆ.


 ಸ್ಟೀಪಲ್​ ಚೇಸ್​ನಲ್ಲಿ ಭಾರತದ ಐತಿಹಾಸಿಕ ಸಾಧನೆ..

ಇನ್ನು ಸ್ಟೀಪಲ್​ ಚೇಸ್​ ಬಗ್ಗೆ ಗೊತ್ತಿರೋರಿಗೆ ಅದೆಷ್ಟು ಟಫ್ ಅಂತಲೂ ಗೊತ್ತಿರುತ್ತೆ. ಇಲ್ಲಿವರೆಗೂ ಕಾಮನ್ ವೆಲ್ತ್ ಗೇಮ್ಸ್​ನಲ್ಲಿ ಸ್ಟೀಪಲ್ ಚೇಸ್​ನಲ್ಲಿ ಕೀನ್ಯಾ ದೇಶದ್ದೇ ಪಾರುಪತ್ಯ. ಆದರೆ ಇದೇ ಮೊದಲ ಬಾರಿಗೆ ಭಾರತ ಇತಿಹಾಸವನ್ನ ಬರೆದಿದೆ. ಭಾರತೀಯ ಸ್ಟೀಪಲ್ ಚೇಸ್ ರನ್ನರ್ ಅವಿನಾಶ್ ಮುಕುಂದ್ ಸಾಬ್ಲೆ 3 ಸಾವಿರ ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಭಾರತದ ಅಥ್ಲೀಟ್ ಛಲದಂಕ ಮಲ್ಲ ಅವಿನಾಶ್ ಪ್ರದರ್ಶನಕ್ಕೆ ಸ್ವತಃ ಕೀನ್ಯಾದವರೂ ಮೂಗ ಮೇಲೆ ಬೆರಳಿಟುಕೊಂಡಿದ್ದಾರೆ.


ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತದ ಎಲ್ಲಾ ಕ್ರೀಡಾಪಟುಗಳು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಮಹಿಳೆಯರ ಹಾಕಿ ಟೀಂ ಅಮೋಘ ಪ್ರದರ್ಶನ ನೀಡಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಸವಾಲೊಡ್ಡಿದ್ರೂ ಪೆನಾಲ್ಟಿ ಶೂಟೌಟ್‌ ವೇಳೆ ಆದ 'ಟೈಮರ್' ಪ್ರಮಾದದಿಂದ ಚಿನ್ನದ ಪದಕ ವಂಚಿತವಾಗಿದೆ. ಆದ್ರೂ ಕಂಚು ​ ಗೆದ್ದಿರುವ ಮಹಿಳೆಯರ ಹಾಕಿ ಟೀಂ ಭರ್ಜರಿ ಸೆಲೆಬ್ರೇಟ್​​ ಮಾಡಿದೆ. ಎಲ್ಲಾ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಪುರುಷರ ಹಾಕಿ ತಂಡವೂ ಪದಕಕ್ಕೆ ಮುತ್ತಿಟ್ಟಿದೆ. ಇದೇ ಮೊದಲ ಬಾರಿಗೆ ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಕ್ರಿಕೆಟ್​ ಪರಿಚಯಿಸಲಾಗಿತ್ತು. ಮೊದಲ ಬಾರಿಯಲ್ಲೇ ಭಾರತೀಯ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿದೆ.


ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೂ, ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ದೇಶವಾಸಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ. ಮಿನಿ ಒಲಿಂಪಿಕ್ಸ್​ ಎಂದೇ ಕರೆಯಲಾಗುವ ಕಾಮನ್ವೆಲ್ತ್​ ಗೇಮ್ಸ್​ 22ನೇ ಆವೃತ್ತಿಗೆ ಭಾರತ 60 ಪದಕಗಳನ್ನು ಗೆದ್ದು, ಗುಡ್​ಬೈ ಹೇಳಿದೆ.. 2024ಕ್ಕೆ ಪ್ಯಾರಿಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲೂ ನಮ್ಮ ಕ್ರೀಡಾಪಟುಗಳು, ಇದೇ ರೀತಿಯ ಅಮೋಘ ಸಾಧನೆ ಮಾಡಲೆಂದು ಎಲ್ಲರೂ ಹಾರೈಸೋಣ.



Post a Comment

0 Comments