ಭಾರತ ಬಿಟ್ಟು ತೊಲಗಿ: ರೋಚಕ ಹೋರಾಟದ ಒಂದು ಝಲಕ್
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಂತ ಮಹತ್ವದ ಕಾಲಘಟ್ಟಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿ ಪ್ರಮುಖವಾದುದು. ಎರಡನೇ ವಿಶ್ವ ಮಹಾಯುದ್ಧದ ಬಿಸಿಯಲ್ಲಿದ್ದ ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಭಾರತದಾದ್ಯಂತ ಕ್ವಿಟ್ ಇಂಡಿಯಾ ಚಳವಳಿ ನಡೆಯಿತು. ಭಾರತದ ಸ್ವಾತಂತ್ರ್ಯ ಪಡೆಯಲು ಇದು ನಿರ್ಣಾಯಕ ಪಾತ್ರ ವಹಿಸಿತು ಎನ್ನುತ್ತಾರೆ ಇತಿಹಾಸಕಾರರು. ಇದು ಶುರುವಾಗಿದ್ದು ೧೯೪೨ ಆಗಸ್ಟ್ ೮ ಮತ್ತು ೯ರಂದು.
ಕ್ವಿಟ್ ಇಂಡಿಯಾ ಚಳವಳಿ ಎಂಬುದು ಬ್ರಿಟಿಷರನ್ನು ಭಾರತ ಬಿಟ್ಟು ತೊಲಗಿ ಎಂದು ಆಗ್ರಹಿಸುವ ಒಂದು ಬಹುದೊಡ್ಡ ಆಂದೋಲನ. ಗಾಂಧೀಜಿ ಕರೆಗೆ ಓಗೊಟ್ಟು ದೇಶಕ್ಕೆ ದೇಶವೇ ಬ್ರಿಟಿಷ್ ಆಡಳಿತದ ವಿರುದ್ಧ ಎದ್ದುನಿಂತಿತ್ತು. ಬ್ರಿಟಿಷ್ ಸರಕಾರಿ ಯಂತ್ರದಲ್ಲಿದ್ದ ಭಾರತೀಯ ಉದ್ಯೋಗಿಗಳೇ ಬಂಡೆದ್ದು ನಿಂತರು.
ಭಾರತೀಯರ ಕ್ವಿಟ್ ಇಂಡಿಯಾ ಚಳವಳಿಯನ್ನು ಬ್ರಿಟಿಷರು ಹತ್ತಿಕ್ಕುವಲ್ಲಿ ಯಶಸ್ವಿಯಾದರೂ ಜನರ ಕಿಚ್ಚನ್ನು ಆರಿಸಲು ಆಗಲಿಲ್ಲ. ಅವರು ದೇಶವನ್ನು ಭಾರತೀಯರಿಗೆ ಒಪ್ಪಿಸಿ ಹೋಗುವುದು ಅನಿವಾರ್ಯ ಎನ್ನುವ ಸ್ಥಿತಿ ಬಂದಿತ್ತು. ನಿಗದಿತ ಅವಧಿಗೆ ಮುನ್ನವೇ ಬ್ರಿಟಿಷರು ಭಾರತ ಬಿಟ್ಟು ತೊಲಗಿದ್ದು ಹೌದು.
ಈಗ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷದ ಸಂಭ್ರಮ. ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಿರ್ಣಾಯಕ ಸ್ವರೂಪ ಕೊಟ್ಟ ಕ್ವಿಟ್ ಇಂಡಿಯಾ ಚಳವಳಿ ಹೇಗೆ ರೂಪುಗೊಂಡಿತು, ಹೋರಾಟ ಹೇಗೆ ನಡೆಯಿತು, ಬ್ರಿಟಿಷರ ಮೇಲೆ ಎಂಥ ಒತ್ತಡ ಇತ್ತು ಇವೆಲ್ಲಾ ವಿವರಗಳು ಇಲ್ಲಿವೆ.
ಕ್ವಿಟ್ ಇಂಡಿಯಾಗೆ ಕಾರಣವೇನು?
ಅದು ಎರಡನೇ ವಿಶ್ವ ಮಹಾಯುದ್ಧದ ಕಾಲಘಟ್ಟ. ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳ ಮೈತ್ರಿ ಒಂದು ಕಡೆ, ಹಾಗು ಅಮೆರಿಕ, ಬ್ರಿಟನ್, ರಷ್ಯಾ ಮೊದಲಾದ ಹಲವು ದೇಶಗಳು ಇನ್ನೊಂದೆಡೆ ಅಲ್ಲಲ್ಲಿ ಮೈತ್ರಿ ಮಾಡಿಕೊಂಡು ವಿಶ್ವಾದ್ಯಂತ ಯುದ್ಧ ಮಾಡುತ್ತಿದ್ದ ಕಾಲ.
1939ರಲ್ಲಿ ಜರ್ಮನಿ ಮತ್ತು ಬ್ರಿಟನ್ ದೇಶಗಳ ಮಧ್ಯೆ ಯುದ್ಧ ಏರ್ಪಟ್ಟಿತು. ಬ್ರಿಟನ್ ದೇಶದ ಆಡಳಿತದ ಭಾಗವಾಗಿದ್ದ ಭಾರತವನ್ನೂ ಈ ಯುದ್ಧದಲ್ಲಿ ಭಾಗಿಯಾಗಿಸಲಾಯಿತು. ಇದು ಗಾಂಧೀಜಿ ಸೇರಿದಂತೆ ಭಾರತದ ಹೋರಾಟಗಾರರಿಗೆ ಅಸಮಾಧಾನ ತಂದಿತು. ಭಾರತೀಯರೊಂದಿಗೆ ಸಮಾಲೋಚನೆ ನಡೆಸದೆಯೇ ಬ್ರಿಟನ್ ತಮ್ಮನ್ನು ಯುದ್ಧದಲ್ಲಿ ಒಳಗೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಭಾರತೀಯ ಸೇನೆಯಲ್ಲಿದ್ದ ಸೈನಿಕರೂ ಕೂಡ ಯುದ್ಧದಲ್ಲಿ ತೊಡಗಲು ಮೀನ ಮೇಷ ಎಣಿಸುತ್ತಿದ್ದರು. ಯುದ್ಧದಲ್ಲಿ ಭಾರೀ ಸಂಕಷ್ಟ ಅನುಭವಿಸುತ್ತಿದ್ದ ಬ್ರಿಟನ್ನರಿಗೆ ಭಾರತೀಯ ಅಸಹಕಾರ ಇನ್ನೂ ಪೀಕಲಾಟಕ್ಕೆ ತಂದಿಟ್ಟಿತು. ಭಾರತೀಯ ಉಪಖಂಡದ ಸೈನಿಕರು ಮತ್ತು ಸಾರ್ವಜನಿಕರು ಅಸಮಾಧಾನಗೊಂಡಿರುವುದನ್ನು ಮನಗಂಡು 1942ರಲ್ಲಿ ಭಾರತವನ್ನು ಒಪ್ಪಿಸಲು ಕ್ರಿಪ್ಸ್ ಆಯೋಗ ಮಾತುಕತೆಗೆ ಬಂದಿತು.
ಯುದ್ಧದ ಬಳಿಕ ಭಾರತೀಯರ ಬೇಡಿಕೆಗಳನ್ನು ಪರಿಗಣಿಸಲಾಗುತ್ತದೆ. ಭಾರತಕ್ಕೆ ಸ್ವಯಂ ಆಡಳಿತದ ಅವಕಾಶ ಕೊಡಲಾಗುತ್ತದೆ. ಯುದ್ಧ ಮುಗಿಯುವವರೆಗೂ ಬ್ರಿಟಿಷರಿಗೆ ಸಹಕಾರ ಕೊಡಬೇಕು ಎಂದು ಕ್ರಿಪ್ಸ್ ಕಮಿಷನ್ ಕೇಳಿಕೊಂಡಿತು.
ಆದರೆ, ಕಾಂಗ್ರೆಸ್ ಪಕ್ಷ ಇದಕ್ಕೆ ಒಪ್ಪಲಿಲ್ಲ. ಈ ಮುಂಚೆ ತಾವು ಇಟ್ಟಿದ್ದ ಬೇಡಿಕೆಯನ್ನೇ ಈಡೇರಿಸಿಲ್ಲ. ಕೇಳಿದ್ದು ತುಪ್ಪ, ಕೊಟ್ಟಿದ್ದು ಕಲ್ಲು. ಬ್ರಿಟಿಷರ ಒಡೆದು ಆಳುವ ನೀತಿ ಮುಂದುವರಿಯುತ್ತಿದೆ ಅಷ್ಟೇ. ಪೂರ್ಣ ಸ್ವರಾಜ್ಯ ಸಿಗುವವರೆಗೂ ಬ್ರಿಟಿಷರಿಗೆ ಸಹಕಾರ ಇಲ್ಲ ಎಂದು ಕಾಂಗ್ರೆಸ್ ನಿರ್ಧರಿಸಿತು.
ಕ್ವಿಟ್ ಇಂಡಿಯಾ ಚಳವಳಿ
ಸ್ವಾತಂತ್ರ್ಯ ಹೋರಾಟಕ್ಕೆ ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಪ್ರವೇಶ ಆದ ಬಳಿಕ ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟಗಳಿಗೆ ಶಕ್ತಿ ಬಂದವು. 1942ರಲ್ಲಿ ಕ್ರಿಪ್ಸ್ ಆಯೋಗದ ಮಾತುಕತೆ ಮುರಿದುಬಿದ್ದ ಬಳಿಕ ಮಹಾತ್ಮ ಗಾಂಧಿ ನಿರ್ಣಾಯಕ ಹೋರಾಟಕ್ಕೆ ನಿರ್ಧಾರ ಮಾಡಿದರು.
1942 ಆಗಸ್ಟ್ 8ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಗಾಂಧೀಜಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟರು. ಭಾರತ ಬಿಟ್ಟು ತೊಲಗಿ ಎಂದು ಬ್ರಿಟಿಷರನ್ನು ಒತ್ತಾಯಿಸುವ ಹೋರಾಟ ಇದು. ಆಗಸ್ಟ್ ಕ್ರಾಂತಿ ಎಂದೂ ಈ ಹೋರಾಟ ಜನಪ್ರಿಯವಾಯಿತು.
'ಅಧಿಕಾರ ಬಂದರೆ ಅದು ಭಾರತೀಯರಿಗೆ ಸೇರಿದ್ದು, ಆ ಅಧಿಕಾರ ಯಾರಿಗೆ ಸಿಗಬೇಕೆಂದು ಭಾರತೀಯರು ನಿರ್ಧರಿಸುತ್ತಾರೆ' ಎಂದು ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ನಿಂತು ತಮ್ಮ ಭಾಷಣದಲ್ಲಿ ಗಾಂಧೀಜಿ ಹೇಳಿದರು.
ಎರಡನೇ ಮಹಾಯುದ್ಧದ ಬಿಸಿಯಲ್ಲೂ ಬ್ರಿಟಿಷರು ಭಾರತದೊಳಗಿನ ಆಂತರಿಕ ಬಂಡಾಯವನ್ನು ಹತ್ತಿಕ್ಕಲು ಸಕಲ ಪ್ರಯತ್ನ ಮಾಡಿತು. ಕ್ವಿಟ್ ಇಂಡಿಯಾ ಚಳವಳಿಯ ನಾಯಕರೆಲ್ಲರನ್ನೂ ಸರಕಾರ ಬಂಧಿಸಿತು. ಆದರೂ ಚಳವಳಿ ಜನಸಾಮಾನ್ಯರನ್ನು ತಲುಪಿ ಹೋಗಿತ್ತು.
ಅಸಹಕಾರ ಆಂದೋಲನ
ದೇಶಾದ್ಯಂತ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯತೊಡಗಿದವು. ಸರಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಧ್ವಜಗಳು ಹಾರಾಡತೊಡಗಿದವು. ಸರಕಾರಿ ಅಧಿಕಾರಿಗಳೂ ಅಸಹಕಾರ ತೋರತೊಡಗಿದರು. ಬಂಗಾಳದಲ್ಲಿ ತೆರಿಗೆ ಹೆಚ್ಚಳದ ವಿರುದ್ದ ರೈತರು ಭಾರೀ ಪ್ರತಿಭಟನೆ ನಡೆಸಿದರು. ಭಾರತೀಯ ಸೈನಿಕರೂ ಅಸಹಕಾರ ತೋರತೊಡಗಿದರು.
ದೇಶಾದ್ಯಂತ ಪರ್ಯಾಯ ಸರಕಾರಗಳೂ ರಚನೆಗೊಂಡವು. ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳತೊಡಗಿದರು. ಮಾತಾಂಗಿನಿ ಹಾಜ್ರ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಪಶ್ಚಿಮ ಬಂಗಾಳದ ಪೊಲೀಸ್ ಠಾಣೆಯೊಂದನ್ನು ಧ್ವಂಸ ಮಾಡಿದರು. ಸುಚೇತ ಕೃಪಲಾನಿ, ಕನಕಲತಾ ಬರುವಾ ಮೊದಲಾದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಬಲಿದಾನಗೈದರು.
ಭಾರತೀಯ ಸಾಂಪ್ರದಾಯಿಕ ಉಡುಗೆ, ಧೋತಿ ಕುರ್ತಾ, ಗಾಂಧಿ ಟೊಪ್ಪಿ ಸ್ವಾತಂತ್ರ್ಯ ಹೋರಾಟಗಾರರಿಗ ಮತ್ತು ಜನಸಾಮಾನ್ಯರನ್ನು ಅಲಂಕರಿಸಿದವು.
ಲಕ್ಷಾಂತರ ಮಂದಿ ಬಂಧನ
ಕ್ವಿಟ್ ಇಂಡಿಯಾ ಚಳವಳಿ ಆರಂಭಗೊಳ್ಳುತ್ತಿದ್ದಂತೆಯೇ ಬ್ರಿಟಿಷರು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಮಹಾತ್ಮ ಗಾಂಧಿ ಸೇರಿದಂತೆ ಚಳವಳಿಯ ಪ್ರಮುಖ ನಾಯಕರೆಲ್ಲರನ್ನೂ ಕೈದು ಮಾಡಿದರು. ಕಾಂಗ್ರೆಸ್‌ನ ಪ್ರಮುಖ ನಾಯಕರು ಮೂರು ವರ್ಷ ಕಾಲ ಜೈಲಿನಲ್ಲೇ ಇರಬೇಕಾಯಿತು. ದೇಶಾದ್ಯಂತ ಒಂದು ಲಕ್ಷ ಜನರನ್ನು ಬಂಧಿಸಲಾಯಿತು.
ನಾಯಕತ್ವ ಇಲ್ಲದೇ ಕಾಂಗ್ರೆಸ್ ಪಕ್ಷದ ಹೋರಾಟ ಸೊರಗಿತು. ಬ್ರಿಟನ್ ಸರಕಾರ ಕಾಂಗ್ರೆಸ್ಸಿಗರ ಬೇಡಿಕೆಗೆ ಜಗ್ಗಲಿಲ್ಲ. ಕ್ವಿಟ್ ಇಂಡಿಯಾ ಚಳವಳಿ ತನ್ನ ಉದ್ದೇಶದಲ್ಲಿ ವಿಫಲವಾಯಿತು ಎಂದೇ ಹಲವರು ಭಾವಿಸಿದ್ದರು. ಆದರೆ, ಜನಸಾಮಾನ್ಯರ ಕೆಚ್ಚು ಆರಲಿಲ್ಲ. ಜೈಲಿನಿಂದ ಬಿಡುಗಡೆಯಾದ ಬಳಿಕ ಕಾಂಗ್ರೆಸ್ ತನ್ನ ಪ್ರಯತ್ನ ಬಿಡಲಿಲ್ಲ. ಯುದ್ಧವೂ ಮುಗಿದಿದ್ದರಿಂದ ಬ್ರಿಟಿಷರು ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಅಂತಿಮವಾಗಿ ಭಾರತಕ್ಕೆ ಪೂರ್ಣ ಸ್ವಾತಂತ್ರ್ಯ ಬಿಟ್ಟುಕೊಡಲು ಬ್ರಿಟನ್ ಪ್ರಭುತ್ವ ನಿರ್ಧರಿಸಿತು.
0 Comments